ಕ್ಯಾಲ್ಸಿಯಂ ಸಮಸ್ಯೆಯಿಂದ ದೂರವಿರಲು ಮೀನು, ಹಾಲು, ಮೊಸರು, ಸೋಯಾ, ಸೊಪ್ಪು ಸೇವಿಸಿ.
ಮೂಳೆಗಳನ್ನು ಗಟ್ಟಿಯಾಗಿಟ್ಟುಕೊಳ್ಳಲು ಕ್ಯಾಲ್ಸಿಯಂ ಅತಿ ಮುಖ್ಯ.
ಮರಗಟ್ಟುವಿಕೆ, ನಿದ್ರಾ ಹೀನತೆ, ಸ್ನಾಯು ಸೆಳೆತ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು.
Healthy Bones: ಸ್ನಾಯು ಸೆಳೆತ, ಮರಗಟ್ಟುವಿಕೆ, ಜುಮ್ಮೆನಿಸೋದು, ಆಯಾಸ, ನಿದ್ರಾ ಹೀನತೆ, ಕೂದಲು ಉದುರುವುದು , ಒಣ ಚರ್ಮ ಕಾಣಿಸಿಕೊಳ್ಳುತ್ತಿದ್ದರೆ..ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ. ಸರಿಯಾದ ಆಹಾರ ಸೇವನೆ ಮಾಡಿ ಎನ್ನುವ ಮುನ್ಸೂಚನೆಯನ್ನು ನಿಮ್ಮ ದೇಹ ನಿಮಗೆ ನೀಡುತ್ತಿದೆ ಎಂದು ಅರ್ಥ.
ಕ್ಯಾಲ್ಸಿಯಂ ಪ್ರತಿಯೊಬ್ಬರ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಬಹುಮುಖ್ಯ ಖನಿಜಾಂಶ. ಇದು ಎಲುಬು, ಹಲ್ಲು, ಮೂಳೆ ಬಲ ಹೆಚ್ಚಿಸಲು ಸೇರಿದಂತೆ ನಾನಾ ವಿಚಾರಕ್ಕೆ ಅತ್ಯಗತ್ಯ. ಸ್ನಾಯುಗಳ ಚಲನೆ, ನರಗಳ ಕಾರ್ಯ ಎಲ್ಲದಕ್ಕೂ ಕ್ಯಾಲ್ಸಿಯಂ ಅಗತ್ಯ ಇದೆ. ಹೀಗಾಗಿ, ಯಾವ ಆಹಾರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಯಾವ ಆಹಾರ ಸೇವನೆ ಮಾಡಿದರೆ ನಿಮ್ಮ ಆರೋಗ್ಯದ ಅಭಿವೃದ್ಧಿ ಉತ್ತಮವಾಗಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಹಸಿರು ಸೊಪ್ಪುಗಳು
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಸೊಪ್ಪನ್ನು ಬಳಕೆ ಮಾಡುತ್ತೇವೆ. ವಾರಕ್ಕೆ ಮೂರು ಬಾರಿಯಾದರೂ ಸೊಪ್ಪಿನ ಸಾರು ಮಾಡುತ್ತೇವೆ. ಕ್ಯಾಲ್ಸಿಯಂ ಕಡಿಮೆ ಇರುವ ಎಲ್ಲರೂ ಪಾಲಕ್ ಮಾತ್ರವಲ್ಲದೆ, ಬಸಳೆ ಸೊಪ್ಪು, ದಂಟಿನ ಸೊಪ್ಪು, ಬ್ರೊಕೋಲಿಯಂತಹ ಆಹಾರ ಪದಾರ್ಥ ನಿಮ್ಮ ದೈನಂದಿನ ಫುಡ್ ಲಿಸ್ಟ್ನಲ್ಲಿ ಸೇರಿಸಿಕೊಳ್ಳಬೇಕು. ಇವುಗಳಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿದೆ.
ಹಾಲು ಮತ್ತು ಹಾಲಿನಿಂದ ತಯಾರಾದ ಉತ್ಪನ್ನ
ಮೊಸರು, ಮಜ್ಜಿಗೆ, ಗಿಣ್ಣು ಪದಾರ್ಥದಲ್ಲಿ ಕ್ಯಾಲ್ಸಿಯಂ ಅಂಶಗಳಿವೆ. ಒಂದು ಲೋಟ ಹಾಲು ಅಥವಾ ಒಂದು ಕಪ್ ಮೊಸರು ನಿಮ್ಮ ಫುಡ್ ಲಿಸ್ಟ್ನಲ್ಲಿ ಸೇರಿಸಿಕೊಳ್ಳುವುದು ತುಂಬಾನೆ ಒಳ್ಳೆಯದು.
ರಾಗಿ
ಧಾನ್ಯಗಳಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ಧಾನ್ಯ ಎಂದರೆ ಅದು ರಾಗಿ. ರಾಗಿಯನ್ನು ಮುದ್ದೆ ರೀತಿ ತಿನ್ನಲು ಸಾಧ್ಯವಾಗದೇ ಹೋದರೆ, ರಾಗಿ ಅಂಬಲಿ, ರಾಗಿ ಗಂಜಿ, ರಾಗಿ ರೊಟ್ಟಿ ಅಥವಾ ರಾಗಿ ಕಾಳನ್ನು ನೆನಸಿ ಅದರ ಹಾಲನ್ನು ಬೆಲ್ಲದ ಜೊತೆಗೆ ಕುಡಿಯಿರಿ. ಇದು ನಿಮ್ಮ ಮೂಳೆಗಳಿಗೆ ಬಲ ನೀಡುವುದಂತೂ ಗ್ಯಾರಂಟಿ.
ಎಳ್ಳು
ಬಿಳಿ ಅಥವಾ ಕಪ್ಪು ಎಳ್ಳಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದೆ. ಬಿಳಿ ಎಳ್ಳಿನ ಸಿಪ್ಪೆ ತೆಗೆದಿರುವುದರಿಂದ ನೀವು ಕಪ್ಪು ಎಳ್ಳನ್ನು ತಿನ್ನುವುದು ಸೂಕ್ತ. ಕಪ್ಪು ಎಳ್ಳಿನಲ್ಲಿ ನೂರು ಗ್ರಾಂಗೆ 975 ಮಿಲಿ ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಬಿಳಿಯಲ್ಲಿ 100 ಗ್ರಾಂಗೆ 60ಮಿಲಿ ಗ್ರಾಂ ಕ್ಯಾಲ್ಸಿಯಂ ಮಾತ್ರ ಲಭ್ಯವಿರುತ್ತದೆ.
ಮೀನು
ನೀವು ಮಾಂಸಹಾರಿಗಳಾಗಿದ್ದರೆ ಮೀನು ಸೇವಿಸಿ. ಇದ್ರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಸಾರ್ಡಿನ್, ಸಾಲ್ಮನ್ ಮೀನಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಹೇರಳವಾಗಿದೆ. ಮೀನುಗಳಿಂದ ಸಿಗುವ ಕ್ಯಾಲ್ಸಿಯಂ ಹಾಲು ಕುಡಿದಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸೋಯಾ
ಸೋಯಾ ಉತ್ಪನ್ನ ಸಸ್ಯಹಾರಿಗಳಿಗೆ ಅತ್ಯುತ್ತಮ ಆಯ್ಕೆ. ಇದರಿಂದ ತಯಾರಿಸಲ್ಪಡುವ ಟೋಫಿನಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಮೂಳೆಗಳ ಬಲವರ್ಧನೆಗೆ ಇದು ಅತ್ಯುತ್ತಮ ಆಹಾರ. ಒಂದು ಕಪ್ ಬೇಯಿಸಿದ ಸೋಯಾಬೀನ್ ನಿಮ್ಮ ದೈನಂದಿನ ಕ್ಯಾಲ್ಸಿಯಂ ಅಗತ್ಯವನ್ನು ಶೇ.13ರಷ್ಟು ಪೂರೈಸುತ್ತದೆ.
ಜೊತೆಗೆ ನಿಯಮಿತ ವ್ಯಾಯಾಮ, ಸೂರ್ಯನ ಬೆಳಕು ಮತ್ತು ಪೂರಕ ಆಹಾರ ಅತಿ ಮುಖ್ಯವಾಗಿ ಬೇಕಾಗುತ್ತದೆ. ಹೀಗಾಗಿ ಇಂದಿನಿಂದ ನಿಮ್ಮ ಆಹಾರದಲ್ಲಿ ಸೋಯಾ, ಹಾಲು, ಮೀನು, ಸೊಪ್ಪು, ರಾಗಿ ಇಂತಹ ಆಹಾರವನ್ನು ಸೇರಿಸಿಕೊಳ್ಳಿ, (ಏಜೆನ್ಸೀಸ್).