ಬೆಂಗಳೂರು: ಹೋಟೆಲ್‌ಗಳಲ್ಲಿ ಊಟ,ತಿಂಡಿ ದರ ಹೆಚ್ಚಳ ತಡೆಗೆ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ವಕೀಲ ಪ್ರಶಾಂತ್ ಮೆತಲ್ ಪತ್ರ ಬರೆದಿದ್ದಾರೆ.
ತರಕಾರಿ, ಹಾಲು, ಸಿಲಿಂಡರ್ ದರ ಹೆಚ್ಚಳವಾದಗ ಹೋಟೆಲ್ ಮಾಲೀಕರು, ಇದನ್ನೇ ನೆಪ ಮಾಡಿಕೊಂಡು ಊಟ, ತಿಂಡಿ, ಕಾಪಿ ಹಾಗೂ ಟೀ ದರ ಹೆಚ್ಚಿಸಿಕೊಂಡು ಹೋಗುತ್ತಾರೆ. ಇದರಿಂದಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ. ಆದರೆ, ಇವುಗಳ ದರ ಇಳಿಕೆ ಸಂದರ್ಭದಲ್ಲಿ ಊಟ, ತಿಂಡಿಗಳ ಮೇಲೆ ದರ ಕಡಿಮೆ ಮಾಡುವ ಗೋಚಿಗೆ ಮಾಲೀಕರು ಮುಂದಾಗುತ್ತಿಲ್ಲ. ಹೋಟೆಲ್ ಮೇಲೆ ಅವಲಂಬಿತರಾದ ದಿನಕೂಲಿ ನೌಕರರಿಗೆ, ಅಸಂಘಟಿತ ವಲಯ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ದರ ಏರಿಕೆ ನಿಯಂತ್ರಿಸಲು ಸರ್ಕಾರ ಸಮಿತಿ ರಚಿಸಬೇಕೆಂದು ಪ್ರಶಾಂತ್ ಮೆತಲ್ ಮನವಿ ಮಾಡಿದ್ದಾರೆ.
ಇತ್ತೀಚಿಗಷ್ಟೇ ಹಾಲಿನ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾಪಿ, ಟೀ ದರ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್‌ನ ಒಟ್ಟು ದರದಲ್ಲಿ 100 ರೂ. ಇಳಿಸಿದ್ದಾರೆ. ಆದರೆ, ಹೋಟೆಲ್‌ನವರು ಆಹಾರದ ಮೇಲಿನ ದರವನ್ನು ಇಳಿಸಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ. ಸಮಿತಿ ಅನುಮತಿ ಪಡೆದು ದರ ಹೆಚ್ಚಳ ಮಾಡಬೇಕೆಂದು ಪ್ರಶಾಂತ್ ಮೆತಲ್ ಒತ್ತಾಯಿಸಿದ್ದಾರೆ.