ಹಳಿಯಾಳ: ಪಟ್ಟಣದಲ್ಲಿ ಮಾಟ ಮಂತ್ರ ವಾಮಾಚಾರ ಪ್ರಕರಣ ನಡೆದಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ವಾಮಾಚಾರ ಮಾಡಿದ ನಿಂಬೆಹಣ್ಣನ್ನ ಅಂಗಡಿ ಒಂದರ ಎದುರು ಎಸೆದು ಹೋಗುತ್ತಿರುವ ದಂಪತಿಗಳಿಬ್ಬರ ವಿಡಿಯೋ ಪಟ್ಟಣದಲ್ಲಿ ಭಾರಿ ವೈರಲ್ ಆಗಿದೆ.
ಬಿಳಿ ನಿಲಿ ಬಣ್ಣದ ಸ್ಕೂಟಿಯಲ್ಲಿ ಬಂದ ದಂಪತಿಗಳು ಬಸ್ ನಿಲ್ದಾಣ ರಸ್ತೆಯ ಮೋತಿಕೆರೆ ಕ್ರಾಸ್ ಬಳಿಯ ಅಂಗಡಿಯೊಂದರ ಎದುರು ಕೆಂಪುಬಣ್ಣದ ದಾರ ಹಾಗೂ ಕಬ್ಬಿಣ ಮೊಳೆಯನ್ನ ಹಾಕಿರುವ ಲಿಂಬು ಒಂದನ್ನ ಎಸೆದು ಹೋಗುತ್ತಿರುವ ವಿಡಿಯೋ ಅಂಗಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಎಲ್ಲಡೆ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಮಾಟ ಮಂತ್ರ ಮಾಡಿ ಲಿಂಬು ಎಸೆದು ಹೋಗಿರುವ ಬಗ್ಗೆ ಸಿಸಿ ಕ್ಯಾಮರಾದ ವಿಡಿಯೋ ಆಧರಿಸಿ ಬಸವರಾಜ ಬೆಂಡಿಗೇರಿಮಠ ಎಂಬುವವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಈ ರೀತಿ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ವೈರಲ್ ಆಗುತ್ತಿರುವ ವಿಡಿಯೋ ತುಣುಕು ನೋಡಿದಾಗ ವಿಡಿಯೋದಲ್ಲಿರುವ ದಂಪತಿ ಮುಖ್ಯ ಮಾರುಕಟ್ಟೆಯ ಬಟ್ಟೆ ವ್ಯಾಪಾರಸ್ಥರು ಎಂದು ಕಂಡು ಬರುತ್ತಿದೆ. ಇವರು ಒಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ರೀತಿ ಮಾಡಿದ್ದಾರೆಂದು ಪಟ್ಟಣದಾದ್ಯಂತ ಚರ್ಚೆಯಾಗುತ್ತಿದ್ದು, ದಂಪತಿಗಳು ಪ್ರಕರಣಕ್ಕೆ ಹೆದರಿ ಊರು ಬಿಟ್ಟಿದ್ದಾರೆಂದು ಈ ಬಗ್ಗೆ ಪೋಲಿಸ್ ತನಿಖೆ ನಡೆಸಲಾಗುತ್ತಿದೆ.
ಒಬ್ಬ ಜೈಲಿಗೆ: ಇದೇ ರೀತಿ ಮತ್ತೊಂದು ಮಾಟಮಂತ್ರದ ಪ್ರಕರಣ ತತ್ವಣಗಿ ಗ್ರಾಮದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ದೂರು ನೀಡಿದ್ದು, ಮಾಟ ಮಂತ್ರ ಮಾಡಿದ್ದ ವ್ಯಕ್ತಿ ನಾರಾಯಣ ಕೃಷ್ಣ ಮೋರೆ ಎಂಬಾತ ಜೈಲಿನ ಕಂಬಿ ಎನಿಸುತ್ತಿದ್ದಾನೆ.