ಸಂಡೂರು: ಅಜ್ಞಾನ ಹಾಗೂ ಅವೈಜ್ಞಾನಿಕ ಆಚರಣೆಗಳಿಂದ ಮುಕ್ತರಾಗಿ ಜೀವನ ನಡೆಸಬೇಕು ಎಂದು ಶಿಕ್ಷಕಿ ಎಚ್.ಡಿ.ರಾಜೇಶ್ವರಿ ಹೇಳಿದರು.
ತಾಲೂಕಿನ ಸುಶೀಲಾನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜ್ಞಾನ, ವಿಜ್ಞಾನ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ರಾಜ್ಯಾದ್ಯಂತ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಹಲವು ಕಾರ್ಯ ಚಟುವಟಿಕೆ ನಡೆಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ನಡೆಸಿದ ನೀರು, ನೈರ್ಮಲ್ಯ, ಆರೋಗ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿ ಉತ್ತಮ ಜ್ಞಾನ ಪಡೆದುಕೊಂಡಿದ್ದಾರೆ ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಷಣ್ಮುಖಪ್ಪ ಮಾತನಾಡಿ, ಈ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಎಚ್.ಅಮೂಲ್ಯ ಪ್ರಥಮ ಸ್ಥಾನ ಪಡೆದು ಎರಡು ಸಾವಿರ ರೂ. ಹಾಗೂ ಏಳನೇ ತರಗತಿ ವಿದ್ಯಾರ್ಥಿ ಪವನ್ ನಾಯ್ಕ ದ್ವಿತೀಯ ಸ್ಥಾನ ಪಡೆದು ಒಂದು ಸಾವಿರ ರೂ. ಬಹುಮಾನ ಪಡೆದಿದ್ದಾರೆ.
ಇದೇ ತಿಂಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಇತಿಹಾಸ-ಸಮಾಜ ವಿಜ್ಞಾನ ಕುರಿತು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಯ್ಕ, ಶಿಕ್ಷಕ ಗಾಳೆಪ್ಪ, ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.