ಮಂಜೇಶ್ವರ: ಸಾಹಿತ್ಯ ಚಟುವಟಿಕೆಗಳು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತವೆ. ಅಕ್ಷರ ಲೋಕದ ಪಯಣ ವೈಚಾರಿಕತೆಯೊಂದಿಗೆ ಸಾಗಿದಾಗ ಬರಹಗಳು ಶಕ್ತಿ ಪಡೆದು ಹೊಸದೊಂದು ಹುಟ್ಟಿಕೊಳ್ಳುತ್ತದೆ ಎಂದು ಹಿರಿಯ ರಂಗಕರ್ಮಿ, ಸಂಘಟಕ ಕಾಸರಗೋಡು ಚಿನ್ನಾಹೇಳಿದರು.
ಕಲ್ಲಚ್ಚು ಪ್ರಕಾಶನ ಮಂಗಳೂರು ಹಾಗೂ ರಂಗಚಿನ್ನಾರಿ ಕಾಸರಗೋಡು ಆಶ್ರಯದಲ್ಲಿ ಶಿಕ್ಷಕ, ಸಾಹಿತಿ ಗಣೇಶ್ ಪ್ರಸಾದ್ ಮಂಜೇಶ್ವರ ಅವರ ಕಥಾ ಸಂಕಲನ ‘ಚಿಲ್ಲಾ’ ಕೃತಿಯನ್ನು ಭಾನುವಾರ ಮಂಜೇಶ್ವರ ಗಿಳಿವಿಂಡು ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿ, ಕತೆ ಅನುಭವದ ಮೂಸೆಯಿಂದ ಜನ್ಮತಾಳುವ ಅಂತರಾಳದ ಭಾವ ಸ್ಫುರಣ ಎಂದರು.
ನಿವೃತ್ತ ಪ್ರಾಂಶುಪಾಲ, ಲೇಖಕ ಪ್ರೊ.ಪಿ.ಎನ್.ಮೂಡಿತ್ತಾಯ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಶುಭಹಾರೈಸಿದರು. ನಿವೃತ್ತ ಶಿಕ್ಷಕಿ ಪ್ರಭಾ ನಾಯಕ್ ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಅವರನ್ನು ಕಲ್ಲಚ್ಚು ಪ್ರಕಾಶನದ ಪರವಾಗಿ ಅಭಿನಂದಿಸಲಾಯಿತು.
ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್.ನಾಯಕ್ ಕೃತಿ ಪರಿಚಯಿಸಿದರು. ಕೃತಿಕಾರ ಗಣೇಶ್ ಪ್ರಸಾದ್ ಮಂಜೇಶ್ವರ ಮಾತನಾಡಿದರು. ರಶ್ಮಿ ನಾಯಕ್ ವಂದಿಸಿದರು. ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.