ಶಿರಸಿ: ಉತ್ತರ ಕನ್ನಡ ಮಲೆನಾಡು ಭಾಗದ ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆ ಟಿಎಎಸ್ ನಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಭಾನುವಾರ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಸಂಸ್ಥೆಯ ಆಡಳಿತ ಶತಮಾನದಲ್ಲಿ ಮೊದಲ ಬಾರಿಗೆ ಕಡವೆ ಕುಟುಂಬದ ಕೈತಪ್ಪಿದೆ.
ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅವರನ್ನು ಹೊರತುಪಡಿಸಿ, ಅವರ ಬಣದ ಉಳಿದ 14 ಜನರು ಸೋಲು ಕಂಡಿದ್ದು, ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಅವರ ಬಣದ 13 ಸದಸ್ಯರು ಜಯಗಳಿಸಿ, ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
1923 ರಲ್ಲಿ ಕಡವೆ ಶ್ರೀಪಾದ ಹೆಗಡೆ ಅವರ ಪರಿಶ್ರಮದ ಫಲವಾಗಿ ಪ್ರಾರಂಭವಾದ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ಸ್ ಸೊಸೈಟಿ(ಟಿಎಸ್‌ಎಸ್)ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಹಲವು ಪಟ್ಟು ವಹಿವಾಟು ಹೆಚ್ಚಿಸಿಕೊಂಡಿರುವ ಸಂಸ್ಥೆ ರಾಜ್ಯಾದ್ಯಂತ ಗಮನ ಸೆಳೆದಿದೆ.
ಸಂಸ್ಥಾಪಕ ಅಧ್ಯಕ್ಷ ಶ್ರೀಪಾದ ಹೆಗಡೆ ಅವರ ನಂತರ ಅವರ ಅಳಿಯ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಅಧ್ಯಕ್ಷರಾಗಿದ್ದರು. ಅವರ ಅನಾರೋಗ್ಯದ ಕಾರಣ ಈಗಿನ ಐದು ವರ್ಷದಲ್ಲಿ ಕಡವೆ ಶ್ರೀಪಾದ ಹೆಗಡೆ ಅವರ ಮಗ ರಾಮಕೃಷ್ಣ ಹೆಗಡೆ ಕಾರ್ಯಾಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು.
ಪ್ರಾರಂಭದಲ್ಲಿ ಅಡಕೆ ವಹಿವಾಟಿಗೆ ಮಾತ್ರ ಸೀಮಿತವಾಗಿದ್ದ ಟಿಎಸ್‌ಎಸ್ ಇತ್ತೀಚಿನ 10 ವರ್ಷಗಳಲ್ಲಿ ಸೂಪರ್ ಮಾರ್ಕೆಟ್ ಮೂಲಕ ಬಂಗಾರ, ಬಟ್ಟೆ, ಚಪ್ಪಲಿ ಮುಂತಾದ ವಸ್ತುಗಳ ಪ್ರಾರಂಭಿಸಿತ್ತು.
ಇದನ್ನೂ ಓದಿ:ನಿಜ ನಾಗರಕ್ಕೆ ಪೂಜೆ
ಶುಂಠಿ, ಬಾಳೆಕೊನೆ ಹರಾಜನ್ನೂ ಪ್ರಾರಂಭಿಸಿತ್ತು. ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿತ್ತು. ಸ್ವೀಟ್ ಸುಪಾರಿಯಂಥ ಉತ್ಪನ್ನಗಳ ತಯಾರು ಮಾಡುತ್ತಿತ್ತು. ಹೊಸ ಉಪಕ್ರಮ ಟಿಎಸ್‌ಎಸ್‌ನಲ್ಲಿ ದೊಡ್ಡ ಬದಲಾವಣೆ ಉಂಟಾಗಲು ಮೂಲ ಕಾರಣವಾಗಿದೆ.
ಸಹಕಾರ ಸಂಘದ ಮೂಲ ಉದ್ದೇಶ ಅಡಕೆ ವಹಿವಾಟು ಬಿಟ್ಟು ಬೇರೆ ವ್ಯವಹಾರಕ್ಕೆ ಇಳಿಯುವುದು ಸರಿಯಲ್ಲ ಎಂಬ ಆಕ್ಷೇಪ ಹಲವು ಸದಸ್ಯರಿಂದ ಕೇಳಿ ಬಂದಿತ್ತು. ಅಲ್ಲದೆ, ಹೊಸ, ವ್ಯವಹಾರಗಳಲ್ಲಿ ಆಡಳಿತ ಮಂಡಳಿಯ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಅದು ಚುನಾವಣೆಯಲ್ಲಿ ಪ್ರತಿಫಲನವಾಗಿದೆ.
ರಾತ್ರಿ 1.30 ಕ್ಕೆ ಫಲಿತಾಂಶ:
ಈ ಹಿಂದೆ ಹಲವು ಬಾರಿ ಚುನಾವಣೆ ನಡೆದಿದ್ದರೂ ಕಡವೆ ಕುಟುಂಬದ ಬಣವೇ ಆಡಳಿತದಲ್ಲಿತ್ತು. 2018 ರಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಈ ಬಾರಿ ಸೊಸೈಟಿಗಳ ಪ್ರತಿನಿಧಿ, ಸಾಮಾನ್ಯ ಸದಸ್ಯರ ಪ್ರತಿನಿಧಿ, ಮಹಿಳೆಯರು, ಹಿಂದುಳಿದ ಅ ಹಾಗೂ ಬ ವರ್ಷ ಸೇರಿ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 32 ಜನ ಕಣದಲ್ಲಿದ್ದರು.
ಸಾಯಂಕಾಲ 5 ರವರೆಗೆ ಮತದಾನ ನಡೆದು, ನಂತರ ಮತ ಎಣಿಕೆ ಪ್ರಾರಂಭವಾಗಿತ್ತು. ತಡ ರಾತ್ರಿ 1.30 ರವರೆಗೂ ಮತ ಎಣಿಗೆ ನಡೆದು ಫಲಿತಾಂಶ ಹೊರ ಬಿದ್ದಿದೆ.
ಎಲ್ಲ ವಿಭಾಗಗಳಲ್ಲೂ ವೈದ್ಯ ಬಣ ಗೆಲುವು ಸಾಽಸಿದೆ. ಮೊದಲಿನಿಂದಲೂ ಹಿನ್ನಡೆಯಲ್ಲೇ ಇದ್ದ ಇದ್ದ ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅಂತಿಮವಾಗಿ ತಮ್ಮ ಎದುರಾಳಿ ಸಂತೋಷ ಭಟ್ ಅವರೆದುರು 4 ಮತಗಳ ಅಲ್ಪ ಅಂತರದಿಂದ ಗೆದ್ದರು.
ಟಿಎಸ್‌ಎಸ್ ಸಂಸ್ಥೆ ನಮಗೆ ಅನ್ನ ನೀಡಿದ ಸಂಸ್ಥೆ.ಈ ಸಂಸ್ಥೆಗೆ ನ್ಯಾಯ ಬದ್ದವಾಗಿ ಆಡಳಿತ ನೀಡುವುದು ನಮ್ಮೆಲ್ಲರ ತಂಡದ ಬಹುದೊಡ್ಡ ಆಸೆಯಾಗಿತ್ತು.ಇದೀಗ ಆ ಆಸೆ ಎಲ್ಲ ಸದಸ್ಯರ ಆಶೀರ್ವಾದದಿಂದ ಈಡೇರಿದೆ.ನಾನು ಮುಂಡಗನಮನೆ ಸೊಸೈಟಿಗೆ ಅಧ್ಯಕ್ಷನಾಗಿ ಕೆಲಸಮಾಡಿದ್ದೇನೆ.ಸಾಕಷ್ಟು ಅನುಭವವಿದೆ.ಆ ಅನುಭವವನ್ನು ಸದಸ್ಯರ ಒಪ್ಪಿಗೆ ಪಡೆದು ಧಾರೆ ಎರೆಯುತ್ತೇನೆ.ಇನ್ನು ಮುಂದೆ ಟಿಎಸ್‌ಎಸ್‌ನಲ್ಲಿ ಹೊಸ ಬದಲಾವಣೆ ನಿರೀಕ್ಷೆ ಮಾಡಬಹುದು.ಗೋಪಾಲಕೃಷ್ಣ ವೈದ್ಯಟಿಎಸ್‌ಎಸ್ ನೂತನ ನಿರ್ದೇಶಕ