ದಾವಣಗೆರೆ: ವೀರಶೈವ ಲಿಂಗಾಯತ ಸಮಾಜದ ಕೆಲವರನ್ನು ಅನ್ಯ ಧರ್ಮಗಳಿಗೆ ಮತಾಂತರ ಮಾಡಲಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ, ಅಂಥವರನ್ನು ಮರಳಿ ಧರ್ಮದ ವ್ಯಾಪ್ತಿಗೆ ತರಲು ಮುಂದಾಗಿದೆ. ಈ ಸಂಬಂಧ ಮಠ-ಮಾನ್ಯಗಳ ಸಹಕಾರದೊಂದಿಗೆ ವಿಶೇಷ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮಹಾಸಭಾ ರಾಷ್ಟೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಶನಿವಾರ ತಿಳಿಸಿದ್ದಾರೆ. ಈ ವಿಚಾರವಾಗಿ ಸಂಘಟನೆಯ ರಾಜ್ಯ, ಜಿಲ್ಲಾ, ತಾಲೂಕು, ನಗರ ಘಟಕಗಳಿಗೆ ಈಗಾಗಲೆ ಪತ್ರ ಬರೆದು ಮತಾಂತರ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಹಾಗೂ ಜಾಗೃತಿ ಮೂಡಿಸಲು ಸೂಚಿಸಿದ್ದಾರೆ.
ಪತ್ರದ ಸಾರಾಂಶ: ವೀರಶೈವ-ಲಿಂಗಾಯತ ಧರ್ಮವು ಶ್ರೇಷ್ಠ ಪರಂಪರೆ ಹೊಂದಿದೆ. ಅತ್ಯಂತ ಪ್ರಭಾವಿಯಾಗಿದ್ದು ಸಾತ್ವಿಕ, ತಾತ್ವಿಕ ನೆಲೆ ಹೊಂದಿದೆ. ಸಮಾಜದ ಒಗ್ಗಟ್ಟು, ಸಾರ್ವಭೌಮತ್ವ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಡುವೆ ನಾಡಿನ ಕೆಲ ಭಾಗಗಳಲ್ಲಿ ವೀರಶೈವ-ಲಿಂಗಾಯತರು ಪ್ರಲೋಭನೆಗಳಿಗೆ ಒಳಗಾಗಿ ಕ್ರಿಶ್ಚಿಯನ್ ಮತ್ತಿತರ ಧರ್ಮಗಳಿಗೆ ಮತಾಂತರವಾಗುತ್ತಿದ್ದಾರೆ ಎಂಬ ಸುದ್ದಿ ನಮ್ಮನ್ನು ಚಿಂತೆಗೀಡು ಮಾಡಿದೆ. ಅಮಾಯಕರು ಸಾಂರ್ದಭಿಕ ಒತ್ತಡಗಳಿಗೆ ಬಲಿಯಾಗಿ ಪರಂಪರೆ ಬಿಟ್ಟು ಅನ್ಯ ಧರ್ಮ ಸ್ವೀಕರಿಸುತ್ತಿರುವ ವರದಿಗಳು ಕಳವಳಕಾರಿಯಾಗಿವೆ. ವೀರಶೈವ ಮಹಸಭಾದ ಜಿಲ್ಲಾ, ತಾಲೂಕು, ನಗರ ಘಟಕಗಳು ಮಠ-ಮಾನ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಆಯಾ ಘಟಕಳ ವ್ಯಾಪ್ತಿಯಲ್ಲಿ ಮತಾಂತರ ನಡೆಯದಂತೆ ನಿಗಾ ವಹಿಸಬೇಕು. ಈ ಕುರಿತು ಮಹಾಸಭೆಯ ಕೇಂದ್ರ ಕಚೇರಿಗೆ ಮಾಹಿತಿ ಮತ್ತು ವರದಿ ನೀಡಬೇಕು.
ಬಲವಂತದ ಮತಾಂತರವನ್ನು ವೀರಶೈವ ಮಹಾಸಭಾ ಎಂದಿಗೂ ಸಹಿಸುವುದಿಲ್ಲ. ಆಸೆ, ಆಮಿಷಗಳಿಗೆ ಬಲಿಯಾಗಿ ಮತಾಂತರ ಆದವರನ್ನು ಮರಳಿ ಧರ್ಮಕ್ಕೆ ಕರೆತರಲು ಕಾರ್ಯಕ್ರಮ ರೂಪಿಸಲಾಗುವುದು. ಈ ಸಂಬಂಧ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ.
| ಡಾ.ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ