ದಾವಣಗೆರೆ: ವಿಆರ್ಎಲ್ ಸಂಸ್ಥೆಯ ಸಾಧನೆ ಸೇರಿ ನಮ್ಮ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಯಶೋಗಾಥೆಗಳು ನಮ್ಮ ವಿದ್ಯಾರ್ಥಿಗಳಿಗೆ ಪಠ್ಯಗಳಾಗಬೇಕು ಎಂದು ಆಂಧ್ರ ಪ್ರದೇಶ ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ. ಟಿ.ವಿ. ಕಟ್ಟಿಮನಿ ಅಭಿಪ್ರಾಯಪಟ್ಟರು.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಗುರುವಾರ, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರಿಗಾಗಿ ಏರ್ಪಡಿಸಿದ್ದ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೂರ ದೇಶಗಳ ಸಕ್ಸಸ್ ಸ್ಟೋರಿಗಳ ಬದಲು ನಮ್ಮ ಸುತ್ತಲಿನ ಸಾಧನೆಗಳೇ ಪ್ರೇರಣೆ ಆಗಬೇಕು. ಕಾರ್ ತಂತ್ರಜ್ಞಾನದಲ್ಲಿ ದೊಡ್ಡ ಹೆಸರು ಮಾಡಿರುವ ಫೋರ್ಡ್ ಕಂಪನಿಯ ಬಗ್ಗೆ ಎಂಬಿಎ ಕೋರ್ಸ್ಗಳಲ್ಲಿ ಬೋಧಿಸುತ್ತೇವೆ ಆದರೆ, ಕಂಬಾರ ವೃತ್ತಿ ಮಾಡುವ ವ್ಯಕ್ತಿಯೊಬ್ಬರು ಹುಬ್ಬಳ್ಳಿಯ ಸಿದ್ದೇಶ್ವರ ಆಂಡ್ ಕಂಪನಿಯ ಮಾಲೀಕರಾಗಿ ದೊಡ್ಡ ಸಂಸ್ಥೆ ಕಟ್ಟಿದರು. ಅದೀಗ 280 ಕೋಟಿ ರೂ. ಗೂ ಹೆಚ್ಚು ವ್ಯವಹಾರ ಮಾಡುತ್ತಿದೆ. ಈ ವಿಷಯಗಳು ನಮ್ಮ ಪಠ್ಯದ ವಸ್ತುವಾಗಬೇಕು ಎಂದರು. ದಾವಣಗೆರೆ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿರುವ ಕೆರೆ, ತುಂಗಭದ್ರಾ ನದಿ, ಭತ್ತ, ಮಂಡಕ್ಕಿ ಭಟ್ಟಿಗಳು, ಡಿಸಿಎಂ ಮಿಲ್ನ ಏಳು ಬೀಳು, ರಾಜನಹಳ್ಳಿ ಹನುಮಂತಪ್ಪ, ಶಾಮನೂರು ಶಿವಶಂಕರಪ್ಪ ಅವರಂಥ ಸಾಧಕರ ಕೊಡುಗೆಗಳ ಬಗ್ಗೆ ಮಾಹಿತಿ ಸಿಗುವಂತಿರಬೇಕು, ಆ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕು ಎಂದು ಸಲಹೆ ನೀಡಿದರು.
ದಾವಣಗೆರೆಯಲ್ಲಿ ಎಷ್ಟು ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ, ಎಷ್ಟು ಲಕ್ಷ ಲೀಟರ್ ತ್ಯಾಜ್ಯ ನೀರು ವ್ಯರ್ಥವಾಗುತ್ತಿದೆ, ಅದನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಯೋಚಿಸಬೇಕು. ಒಟ್ಟಿನಲ್ಲಿ ಪಠ್ಯಪುಸ್ತಕಗಳಲ್ಲಿ ಭಾರತ ಇರಬೇಕು. ಸ್ಥಳೀಯ ಸಂಗತಿಗಳ ಬಗ್ಗೆ ತರಗತಿಗಳಲ್ಲಿ ಚರ್ಚೆಯಾಗಬೇಕು ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಕೇವಲ ಬೋಧನೆಗೆ ಸೀಮಿತವಾಗದೆ ಕೆಲಸ ಮಾಡುವವರ ತಾಣಗಳಾಗಬೇಕು. ಕೈಕೆಸರು ಮಾಡುವ ಸಮಾಜ ನಿರ್ವಿುಸುವ ನಿಟ್ಟಿನಲ್ಲಿ ನಮ್ಮ ಪಠ್ಯಪುಸ್ತಕಗಳನ್ನು ರೂಪಿಸಬೇಕಿದೆ ಎಂದು ಹೇಳಿದರು. ಇದು ಭಾಷಣದ, ಬೋಧನೆಯ ಕಾಲವಲ್ಲ, ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ. ಕುಳಿತಲ್ಲೇ ಲೆಕ್ಕಾಚಾರ, ಭಾಗಾಕಾರ ಮಾಡುವ ಶಿಕ್ಷಣ ಬೇಕಿಲ್ಲ, ನಮ್ಮನ್ನು ಕ್ರಿಯೆಗೆ ಹಚ್ಚುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ನುರಿತ ಮೆಕ್ಯಾನಿಕ್, ಪಂಕ್ಚರ್ ಸರಿಪಡಿಸುವ ವ್ಯಕ್ತಿ, ವಾಹನಗಳನ್ನು ದುರಸ್ತಿ ಮಾಡುವವರನ್ನು ಬೋರ್ಡ್ ಆಫ್ ಸ್ಟಡೀಸ್ಗೆ ತೆಗೆದುಕೊಳ್ಳಬೇಕು, ಜ್ಞಾನ ಮತ್ತು ಕೆಲಸ ಜತೆ ಜತೆಗೇ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಕುಲಸಚಿವೆ (ಮೌಲ್ಯಮಾಪನ) ಪ್ರೊ. ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಡಿ. ಪ್ರಿಯಾಂಕಾ, ಪ್ರಾಧ್ಯಾಪಕ ಗೋಪಾಲ ಅಡವಿ ರಾವ್, ಬಿಐಇಟಿ ಪ್ರಾಂಶುಪಾಲ ಎಚ್.ಬಿ. ಅರವಿಂದ್ ಇದ್ದರು.
ಹೊಸ ವ್ಯವಸ್ಥೆ ಜಾರಿಗೆ ಬರುವಾಗ ಹಲವು ತೊಡಕುಗಳು ಬರಬಹುದು, ಅವುಗಳನ್ನು ಪರಿಹರಿಸಿಕೊಳ್ಳುತ್ತ ಮುಂದೆ ಸಾಗೋಣ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಈಗಷ್ಟೆ ಅಂಬೆಗಾಲು ಇಡುತ್ತಿದ್ದೇವೆ, ಈ ಹಂತದಲ್ಲಿ ಎಡವಬಹುದು. ಮುಂದೆ ಎಲ್ಲವೂ ಸರಿಹೋಗುತ್ತದೆ.
| ಪ್ರೊ. ಬಿ. ತಿಮ್ಮೇಗೌಡ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ
ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಬಹಳ ಹಿಂದೆಯೆ ನಾವು ಅಳವಡಿಸಿದ್ದೇವೆ. ವಿನೂತನ ಸಂಶೋಧನೆಗಳ ಮೂಲಕ ಗಮನ ಸೆಳೆದಿದ್ದೇವೆ.
| ಪ್ರೊ. ವೈ. ವೃಷಭೇಂದ್ರಪ್ಪ ಬಿಐಇಟಿ ನಿರ್ದೇಶಕ