ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ. 
ಜಿಲ್ಲೆ

ಮೇಲ್ಮನೆ ಬಹುಮತಕ್ಕೆ ಪಣ; ಬಿಜೆಪಿ ಜನಸ್ವರಾಜ್ಯ ಸಮಾವೇಶ, ಮತಬೇಟೆಯಲ್ಲಿ ನಾಯಕರು ನಿರತ

ಬಾಗಲಕೋಟೆ/ಮೈಸೂರು/ಕಲಬುರಗಿ: ರಾಜ್ಯದಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ವಿಧಾನ ಪರಿಷತ್​ನಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳಲು ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಾಗಲಕೋಟೆಯಲ್ಲಿ ಮನವಿ ಮಾಡಿದರು. ಬಿಜೆಪಿ ಜನಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿಧಾನ ಪರಿಷತ್​ನಲ್ಲಿ ಬಹುಮತ ಪಡೆದುಕೊಳ್ಳಲು 12 ಸ್ಥಾನಗಳು ಅಗತ್ಯವಾಗಿದೆ. 20 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದರು. ಯಡಿಯೂರಪ್ಪ ಅವರನ್ನು ನೋಡಲು ಕಾರ್ಯಕರ್ತರು, ಅಭಿಮಾನಿಗಳು ಮುಗಿಬಿದ್ದರು. ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಮತ್ತಿತರರು ಇದ್ದರು.

ಹಲವರಿಂದ ನಾಮಪತ್ರ: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪರಿಷತ್ತಿನ ಹಾಲಿ ಸದಸ್ಯ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಪೂಜಾರ ಉಮೇದುವಾರಿಕೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ದ್ವಿಸದಸ್ಯ ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಿ.ಎಚ್. ಪೂಜಾರ ಉಮೇದುವಾರಿಕೆ ಸಲ್ಲಿಸಿದರು.

ಅರುಣ್ ನಾಮಪತ್ರ: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ನಾಮಪತ್ರ ಸಲ್ಲಿಸಿದರು.

ನಾನು ಮುಂದಿನ ಸಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವ ವಿಚಾರ ಹೈಕಮಾಂಡ್ ನಿರ್ಧರಿಸುತ್ತದೆ. ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಅನ್ನುವ ಮಾತಿಲ್ಲ. ಪಕ್ಷವನ್ನು ಕಟ್ಟುವ ಸಲುವಾಗಿ ಸಾಮೂಹಿಕ ನೇತೃತ್ವವಹಿಸಲಾಗಿದೆ. ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ. 2023 ರಲ್ಲಿ 140 ಸ್ಥಾನ ಗೆಲ್ಲುವುದು ನಮ್ಮ ಗುರಿ. ಹೀಗಾಗಿ ಮತ್ತೆ ರಾಜ್ಯ ಪ್ರವಾಸ ಮಾಡಲಿದ್ದೇನೆ.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ

ಜೆಡಿಎಸ್​ನಲ್ಲಿ ಶಂಖ ಊದಲೂ ಜನರಿಲ್ಲ: ಬಿಜೆಪಿಯಲ್ಲಿ ಶಂಖ ಊದಲು ಜನರಾದರೂ ಇದ್ದಾರೆ. ಜೆಡಿಎಸ್​ನಲ್ಲಿ ಅದಕ್ಕೂ ಜನ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೈಸೂರಿನಲ್ಲಿ ತಿರುಗೇಟು ನೀಡಿದರು. ನಾವು ರಾಜ್ಯದಲ್ಲಿ ಅಭಿವೃದ್ಧಿಯ ಶಂಖ ಊದುತ್ತಿದ್ದೇವೆ, ಆ ಮೂಲಕ ಮತ ಕೇಳುತ್ತಿದ್ದೇವೆ. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಎಷ್ಟು ಸೀಟು ಪಡೆಯುತ್ತೀರಾ ನೋಡೋಣ ಎಂದು ಲೇವಡಿ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಇತರರು ಇದ್ದರು.

ದಾಖಲೆ ಮತಗಳಿಂದ ಗೆಲುವು: ಕಲಬುರಗಿ-ಯಾದಗಿರಿ ಜಿಲ್ಲೆಯಿಂದ ಸ್ಪರ್ಧಿಸಿರುವ ಡಾ.ಬಿ.ಜಿ.ಪಾಟೀಲ್ ದಾಖಲೆ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಕಲಬುರಗಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಜನಪರ ಮತ್ತು ಸ್ಥಳೀಯ ಸಂಸ್ಥೆ ಸದಸ್ಯರ ಹಿತ ಕಾಯುವಂತಹ ಕಾಯ್ದೆ, ಮಸೂದೆಗಳಿಗೆ ಅನುಮೋದನೆ ಪಡೆಯಲು ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತದ ಅಗತ್ಯವಿದೆ. ಹೀಗಾಗಿ ಪಾಟೀಲರನ್ನು ಸಂಘಟಿತ ಪ್ರಯತ್ನದ ಮೂಲಕ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಲಖನ್ ಪಕ್ಷೇತರರಾಗಿ ಸ್ಪರ್ಧೆ?

ಬೆಂಗಳೂರು: ಮೇಲ್ಮನೆ ಕದನಕ್ಕೆ 20 ಅಧಿಕೃತ ಅಭ್ಯರ್ಥಿಗಳನ್ನು ಬಿಜೆಪಿ ಪ್ರಕಟಿಸಿದ್ದು, ಟಿಕೆಟ್ ವಂಚಿತರ ಅಸಮಾಧಾನ ಹಾಗೂ ಅಪಸ್ವರ ಸರಿಪಡಿಸುವ ಜವಾಬ್ದಾರಿ ಪಕ್ಷದ ಹೆಗಲೇರಿದೆ. ಬೆಳಗಾವಿಯಲ್ಲಿ ಎರಡು ಸ್ಥಾನಗಳಿಗೆ ಪಕ್ಷ ಸ್ಪರ್ಧಿಸಬೇಕು. ಲಖನ್ ಜಾರಕಿಹೊಳಿಗೆ ಅವಕಾಶ ನೀಡಬೇಕು ಎಂದು ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಿಡಿದು ಪಟ್ಟು ಫಲಿಸಿಲ್ಲ. ಪಕ್ಷಕ್ಕಿಂತಲೂ ಬೆಳಗಾವಿ ಜಿಲ್ಲೆ ರಾಜಕೀಯ ಪ್ರತಿಷ್ಠೆ ಮೆರೆಯುವುದು ಜಾರಕಿಹೊಳಿ ಸೋದರರಿಗೆ ಮುಖ್ಯವಾಗಿದ್ದು, ಇದೇ ಕಾರಣಕ್ಕೆ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಗೆಲ್ಲುವ ಅವಕಾಶಗಳನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ ದ್ವಿಸದಸ್ಯ ಕ್ಷೇತ್ರಗಳಲ್ಲಿ ತಲಾ ಒಂದು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಪಕ್ಷದ ಚುನಾವಣಾ ಕಾರ್ಯತಂತ್ರದ ಭಾಗವಾಗಿದೆ. ಮಹಾಂತೇಶ ಕವಟಗಿಮಠ ಒಬ್ಬರನ್ನು ಮಾತ್ರ ಕಣಕ್ಕಿಳಿಸಲು ಪಕ್ಷದ ನಿರ್ಧಾರಕ್ಕೆ ಕಾರ್ಯ ಹಾಗೂ ಕಾರಣಗಳನ್ನು ಜಾರಕಿಹೊಳಿ ಸೋದರರಿಗೆ ರಾಜ್ಯ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಜತೆಗೆ ಸ್ಥಳೀಯ ಸಂಸ್ಥೆಗಳ ಮೇಲಿನ ಹಿಡಿತ ಸಡಿಲವಾಗಬಾರದು ಎಂಬ ಜಾರಕಿಹೊಳಿ ಸೋದರರ ಅಪೇಕ್ಷೆಗೆ ಸ್ಪಂದಿಸಿ, ಲಖನ್​ಗೆ ಪರೋಕ್ಷ ಒತ್ತಾಸೆ ನೀಡುವ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕಣದಿಂದ ಹಿಂದೆ ಸರಿದ ಡಾ.ಎಂಎನ್​ಆರ್

ಮಂಗಳೂರು: ಪಕ್ಷೇತರನಾಗಿ ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಣದಿಂದ ಹಿಂದೆ ಸರಿದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತ ನಾಯಕನಾಗಿ ಉಳಿಯಬೇಕೆಂಬುದು ಸಹಕಾರಿ ಕ್ಷೇತ್ರದ ಪ್ರಮುಖರ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಆಶಯ. ರಾಜಕೀಯ ಪ್ರವೇಶದಿಂದ ಸಹಕಾರಿಗಳೆಲ್ಲರಿಂದ ದೂರ ಉಳಿಯುವ ಸಾಧ್ಯತೆ ಇರುವುದರಿಂದ, ಸಹಕಾರಿ ನಾಯಕನಾಗಿಯೇ ಇರಬೇಕು ಎಂಬ ಆಶಯದಿಂದ ಸ್ಪರ್ಧಾಕಣದಿಂದ ದೂರ ಸರಿಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ರಾಜೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಹಕಾರಿ ಕ್ಷೇತ್ರದ ಧ್ವನಿಯಾಗಿ ಪರಿಷತ್​ನಲ್ಲಿ ಬೇಕು ಎಂಬ ಭಾವನೆ ಇತ್ತು. ಅದಕ್ಕಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದಿದ್ದೆ. ಕಾಂಗ್ರೆಸ್ ಪಕ್ಷದಿಂದ ನನ್ನನ್ನು ದೂರವಾಣಿ ಮೂಲಕ ಸಂರ್ಪಸಿ ಪಕ್ಷದಿಂದ ಸ್ಪರ್ಧಿಸಲು ಹೇಳಿದ್ದರು. ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರೆ ಎರಡೂ ಪಕ್ಷದ ಮತ ವಿಭಜನೆ ಆಗುತ್ತಿತ್ತು. ಈಗ ನಿರ್ಧಾರ ಬದಲಿಸಿದ್ದೇನೆ. ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸದೆ ತಟಸ್ಥವಾಗಿರುತ್ತೇನೆ. ಪಕ್ಷ ನೋಡದೆ ಒಳ್ಳೆಯ ಕೆಲಸಕ್ಕೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ.