ಜಿಲ್ಲೆ

ಮೂಲ್ಕಿ ಸೀಮೆಯ ಕಂಬಳ ಯಶಸ್ಸಿಗೆ ಸಹಕಾರ : ದುಗ್ಗಣ್ಣ ಸಾವಂತರ ಮನವಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿ ಸೀಮೆಯ ಗೌರವದ ಪ್ರತೀಕವಾದ ಅರಸು ಕಂಬಳ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮೂಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರು ಮನವಿ ಮಾಡಿದರು.

ಪಡುಪಣಂಬೂರು ಮೂಲ್ಕಿ ಅರಮನೆಯ ಬಸದಿಯ ದೇವರು ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಬಸದಿ ಅರ್ಚಕ ಬಾಬು ಇಂದ್ರರ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿ, ಅಲ್ಲಿಂದ ಕಂಬಳದ ಕರೆಗೆ ತೆರಳಿ ಪ್ರಸಾದ ಸಮರ್ಪಿಸುವ ಮೂಲಕ ಮುಲ್ಕಿ ಸೀಮೆ ಅರಸು ಕಂಬಳದ ಪೂರ್ವಭಾವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

700 ವರ್ಷಗಳಿಗಿಂತ ಹೆಚ್ಚು ಹಿಂದಿನ ಮೂಲ್ಕಿ ಸೀಮೆ ಅರಸು ಕಂಬಳ ಡಿಸೆಂಬರ್ 22ರಂದು ನಡೆಯಲಿದ್ದು, ಕಂಬಳದ ಪೂರ್ವಭಾವಿಯಾಗಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಘ ಸಂಸ್ಥೆಯಿಂದ ನಡೆಯುವ ಶ್ರಮದಾನಗಳು ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ವಕೀಲ ಚಂದ್ರಶೇಖರ್ ಜಿ.ಕಾಸಪ್ಪಯನವರ ಮನೆ, ಟಿವಿ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್, ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್, ಪಡುಪಣಂಬೂರು ಗ್ರಾಪಂ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಹಳೆಯಂಗಡಿ ಗ್ರಾಪಂ ಸದಸ್ಯ ಚಂದ್ರಕುಮಾರ್ ಸಸಿಹಿತ್ಲು, ಸ್ಥಳಿಯ ಮುಖಂಡರಾದ ಗೌತಮ್ ಜೈನ್ ಮೂಲ್ಕಿ ಅರಮನೆ, ಮಹೀಮ್ ಹೆಗ್ಡೆ ಬಪ್ಪನಾಡು, ಮಾಧವ ಶೆಟ್ಟಿ ಉತ್ರಂಜೆ, ಉದಯ ಬೆರ್ನಾಡ್, ನವೀನ್ ಪುತ್ರನ್, ವಿಜಯ ಕುಮಾರ್ ಶೆಟ್ಟಿ ಕೋಲ್ನಾಡು, ಸತೀಶ್, ಸುಧೇಶ್ ಕುಮಾರ್, ಸುಧೀರ್ ಶೆಟ್ಟಿ ಶಿಮಂತೂರು, ಧರ್ಮಾನಂದ ಶೆಟ್ಟಿಗಾರ್, ಶರತ್ ಧರ್ಮಸಾನ ಮತ್ತಿತರರು ಉಪಸ್ಥಿತರಿದ್ದರು.