ಕೂಡ್ಲಿಗಿ: ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸಲು ಅಭಿಯಾನ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲೂಕು ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಇ-ಸ್ವತ್ತು ದಾಖಲೆ ಪಡೆಯಲು ಹಣ ವಸೂಲಿ ಮಾಡುತ್ತಾರೆಂಬ ದೂರುಗಳಿವೆ. ಹೀಗಾಗಿ ನಾಳೆಯಿಂದಲೇ ಇ-ಸ್ವತ್ತು ಅಭಿಯಾನ ಕೈಗೊಂಡು, ಕಾಲಮಿತಿಯಲ್ಲಿ ಮನೆ ಬಾಗಿಲಿಗೆ ದಾಖಲೆ ವಿತರಿಸಬೇಕು.
ನಿಗದಿತ ಸರ್ಕಾರಿ ಶುಲ್ಕ ಬಿಟ್ಟು ಹೆಚ್ಚುವರಿ ಹಣ ವಸೂಲಿ ಮಾಡಬಾರದು. ಪ್ರತಿ ಗ್ರಾಮದಲ್ಲಿ ಡಂಗುರ ಸಾರಿ ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಜಮೀರ್, ಕೂಡ್ಲಿಗಿಯ ನಂತರ ಜಿಲ್ಲೆಯ ಉಳಿದ ತಾಲೂಕುಗಳಲ್ಲಿಯೂ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ
ಎಲ್ಲ ಶಾಲಾ, ಕಾಲೇಜು ಹಾಸ್ಟೆಲ್ ಆವರಣದಲ್ಲಿ ನುಗ್ಗೆ, ಕರಿಬೇವು, ನಿಂಬೆ ಸಸಿ ನೆಡಲು ತೋಟಗಾರಿಕೆ ಅಧಿಕಾರಿಗಳಿಗೆ ಡಿಸಿ ಎಂ.ಎಸ್.ದಿವಾಕರ ಸೂಚನೆ ನೀಡಿದರು. ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸುಲಭವಾಗಿ ದೊರೆಯಲಿದೆ ಎಂದ ಸಚಿವರು, ಬೆಳೆ ವಿಮೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ತಾಲೂಕಿನ 74 ಕೆರೆಗಳಿಗೆ 800 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಕೈಗೊಂಡಿದ್ದು ಮುಗಿಯುವ ಹಂತದಲ್ಲಿದೆ. ಕೆಲವೆಡೆ ರೈತರ ವಿರೋಧದಿಂದ ಹಿನ್ನಡೆಯಾಗಿದೆ. ಆದಷ್ಟು ಬೇಗ ಅವರ ಮನವೊಲಿಸಿ ಕಾಮಗಾರಿ ಮುಗಿಸುವುದಾಗಿ ಇಂಜಿನಿಯರ್ ಮಹೇಶ್ ಸಭೆಗೆ ತಿಳಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪ್ರತಿಕ್ರಿಯಿಸಿ,ತಾಲೂಕಿನ ರೈತರ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಏನಾದರೂ ತೊಂದರೆಗಳಿದ್ದಲ್ಲಿ ನನಗೆ ಹಾಗೂ ಸಚಿವರಿಗೆ ತಿಳಿಸಿ ಎಂದು ಡಿಸಿ ಎಂ.ಎಸ್.ದಿವಾಕರ ಅಧಿಕಾರಿಗೆ ಹೇಳಿದರು. ಜಿಪಂ ಸಿಇಒ ಸದಾಶಿವ ಪ್ರಭು, ಎಸ್ಪಿ ಶ್ರೀಹರಿ ಬಾಬು, ಡಿಎಫ್‌ಒ ಅರ್ಸಾಲಾನ್ ಇದ್ದರು.
ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಶಿಥಿಲಗೊಂಡ ಕಟ್ಟಡ, ಕೊಠಡಿಗಳನ್ನು ನವೀಕರಣ ಮಾಡುವಂತೆ ಬಿಇಒಗೆ ಸಚಿವ ಜಮೀರ್ ನಿರ್ದೇಶಿಸಿದರು. ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಿ, ವಿಶೇಷ ಹಣಕಾಸು ಅಗತ್ಯತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ವಿಶೇಷ ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ ಶಾಲಾ, ಕಾಲೇಜು, ಹಾಸ್ಟೆಲ್ ಕಾಂಪೌಂಡ್ ಗೋಡೆಗಳು ಹಾಗೂ ಶೌಚಗೃಹಗಳನ್ನು ನರೇಗಾದಡಿ ನಿರ್ಮಾಣ ಮಾಡಬೇಕು ಎಂದು ಬಿಇಒ ಪದ್ಮನಾಭ ಕರ್ಣಂ ಹಾಗೂ ಸಿಡಿಪಿಒ ನಾಗನಗೌಡಗೆ ತಿಳಿಸಿದರು.
ಕಾರ್ಮಿಕ ಕಾರ್ಡ್ ಸೇರಿ ಇತರ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡಿದ್ದೀರಾ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಚೇತನ್ ಕುಮಾರಗೆ ಜಮೀರ್ ಪ್ರಶ್ನಿಸಿದರು. ನಾನು ಬಂದು ಒಂದು ತಿಂಗಳಾಗಿದ್ದು, ಮಾಹಿತಿ ಇಲ್ಲ ಎಂದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಿಂಗಳಾದರೂ ಇಲಾಖೆಗೆ ಬಗ್ಗೆ ತಿಳ್ಕೊಂಡಿಲ್ಲ ಅಂದ್ರೆ ನೀವಿಲ್ಲಿ ಯಾಕಿರಬೇಕು.
ಬರೀ ದುಡ್ಡು ಮಾಡೋದಕ್ಕೆ ಬಂದಿದ್ದಿಯಾ ಅಂತ ಹರಿಹಾಯ್ದರು. ಕಾರ್ಮಿಕ ಇಲಾಖೆಯಲ್ಲಿ 25 ಸಾವಿರ ಕೋಟಿ ಇದೆ. ಲೇಬರ್ ಕಾರ್ಡ್ ಮಾಡಿಸಲು ಬಂದವರ ಅರ್ಜಿ ರಿಜೆಕ್ಟ್ ಮಾಡಿದ್ರೆ ಸುಮ್ಮನಿರಲ್ಲ. ಕಾರ್ಮಿಕರ ಸೌಲಭ್ಯಗಳ ಬಗ್ಗೆ ಅವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಜಮೀರ್ ತಾಕೀತು ಮಾಡಿದರು.