ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಿಂದ 15ನೇ ಹಣಕಾಸು ಮತ್ತು ನರೇಗಾದಲ್ಲಿ 3 ಕೋಟಿ ರೂ. ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಆರೋಪಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೆರೆ ಅಭಿವೃದ್ಧಿ, ಮೆಟ್ಲಿಂಗ್, ರಸ್ತೆ ನಿರ್ಮಾಣ, ಇಂಗು ಗುಂಡಿ, ಧನದ ಶೆಡ್, ಸಸಿ ನಡೆವುದು ಇತರ ಕಾಮಗಾರಿಗಳನ್ನು ಮಾಡದೆ ಬಿಒಸಿ ಸೇವೆ ಮಾಡಿ 2 ಕೋಟಿ ರೂ. ಕಬಳಿಸಲಾಗಿದೆ.
ಗ್ರಾಪಂನಿಂದ ಕೈಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಲ್ಲ ಎಂದು ದೂರಿದರು.
ಪಿಡಿಒ ಬೋಗಸ್ ಬಿಲ್‌ಗಳನ್ನು ಸೃಷ್ಠಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಆದ್ದರಿಂದ ಮೆದಿಕಿನಾಳ ಗ್ರಾಪಂ ಕಾಮಗಾರಿಗಳ ಬಿಒಸಿ ಹಣವನ್ನು ತಡೆಹಿಡಿದು, ಕಾಮಗಾರಿಗಳ ಸ್ಥಳ ಪರೀಕ್ಷಿಸಬೇಕು.
ಬೋಗಸ್ ಬಿಒಸಿ ಸೇವೆ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಭ್ರಷ್ಟಾಚಾರದಡಿ ಕ್ರಿಮಿನಲ್ ಕೇಸ್ ದಾಖಲಿಸಿ ಸೇವೆಯಿಂದ ಅಮಾನತುಗೊಳಿಸಬೇಕು. ಒಂದು ವೇಳೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ತಾಪಂ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಸಿದ್ದಪ್ಪ ಹೂವಿನಭಾವಿ, ಭೀಮರಾಯಪ್ಪ ಬಳಗಾನೂರು, ಮರಿಸ್ವಾಮಿ ಬೆನಕನಾಳ, ಅಮರಪ್ಪ ಡಬ್ಬೇರುಮಡು, ಮೌನೇಶ ಇದ್ದರು.