ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸಲು ಪತಿ ಅಸಮರ್ಥನಾಗಿದ್ದಾನೆಂದು ಪತ್ನಿ ನಿರಾಧಾರ ಆರೋಪ ಮಾಡಿದರೆ ಅದು ಕ್ರೌರ್ಯವೆನಿಸಿಕೊಳ್ಳಲಿದ್ದು, ಅದರ ಆಧಾರದಲ್ಲಿ ಪತಿ ವಿವಾಹ ವಿಚ್ಛೇದನ ಕೋರಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಪತ್ನಿ ಮತ್ತೊಬ್ಬರ ಮುಂದೆ ತನ್ನನ್ನು ನಪುಂಸಕನೆಂದು ನಿರಾಧಾರ ಆರೋಪ ಮಾಡಿದ್ದು, ಆಕೆಯಿಂದ ಮಾನಸಿಕ ಕಿರುಕುಳವಾಗುತ್ತಿದೆ. ಆದ್ದರಿಂದ, ವಿಚ್ಛೇದನ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕೌಟುಂಬಿಕ ಕೋರ್ಟ್ ವಜಾಗೊಳಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತಿಯ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ಪೀಠ, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 13ರ ಪ್ರಕಾರ ನಪುಂಸಕತ್ವವನ್ನು ವಿಚ್ಚೇದನಕ್ಕೆ ಕಾರಣ ಎಂದು ಪರಿಗಣಿಸಲು ಸಾಧ್ಯವಿಲ್ಲವಾದರೂ, ನಪುಸಂಕತ್ವದ ಕುರಿತು ಪತ್ನಿ ಸುಳ್ಳು ಆರೋಪ ಮಾಡಿದರೆ ಖಂಡಿತವಾಗಿಯೂ ಅದು ಮಾನಸಿಕ ಕಿರುಕುಳವೆನಿಸಿಕೊಳ್ಳಲಿದೆ. ಇದು ಕಾಯ್ದೆಯ ಸೆಕ್ಷನ್ 13(1)(ಐಎ) ಅಡಿಯಲ್ಲಿ ಮಾನಸಿಕ ಕ್ರೌರ್ಯದ ವ್ಯಾಪ್ತಿಗೆ ಬರಲಿದ್ದು, ಪತಿ ವಿಚ್ಛೇದನ ಕೋರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವೈದ್ಯಕೀಯ ಪರೀಕ್ಷೆಗೆ ಒಪ್ಪಿದ್ದ ಪತಿ: ಪತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ. ಆದರೆ, ಪತಿಯ ನಪುಂಸಕತ್ವವನ್ನು ವೈದ್ಯಕೀಯ ತಪಾಸಣೆ ನಡೆಸಿ ಅಗತ್ಯ ದಾಖಲೆಗಳೊಂದಿಗೆ ಸಾಬೀತು ಮಾಡುವ ಪ್ರಯತ್ನವನ್ನು ಪತ್ನಿ ಮಾಡಿಲ್ಲ. ಈ ರೀತಿಯ ಸಾಬೀತಾಗದ ಆರೋಪಗಳಿಂದ ಪತಿ ಮಾನಸಿಕವಾಗಿ ವಿಚಲಿತರಾಗುವುದಲ್ಲದೆ, ದಂಪತಿ ನಡುವೆ ಸಾಮರಸ್ಯವಿಲ್ಲದಂತಾಗುತ್ತದೆ. ಇದರಿಂದ, ಪತಿಗೆ ಪತ್ನಿಯೊಂದಿಗೆ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪತ್ನಿ ಮರುಮದುವೆಯಾಗುವರೆಗೂ ಆಕೆಗೆ ಮಾಸಿಕ 8 ಸಾವಿರ ರೂ. ಜೀವನಾಂಶ ನೀಡಬೇಕೆಂದು ಪತಿಗೆ ಆದೇಶಿಸಿದೆ.
ಪ್ರಕರಣವೇನು?: ಧಾರವಾಡದ ವ್ಯಕ್ತಿ ಹಾಗೂ ಹಾವೇರಿಯ ಮಹಿಳೆ 2013ರ ಮೇ 13ರಂದು ಮದುವೆಯಾಗಿದ್ದರು. ಮದುವೆಯಾದ 1 ತಿಂಗಳು ಪತ್ನಿ ಸಾಂಸಾರಿಕ ಜೀವನಕ್ಕೆ ಸಹಕಾರ ನೀಡುತ್ತಿದ್ದಳು. ಆ ನಂತರ ಆಕೆಯ ನಡವಳಿಕೆ ಬದಲಾಗಿತ್ತು. ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದಳು. ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರಲಿಲ್ಲ. ಗಂಡನಾಗಿರಲು ಸಮರ್ಥನಿಲ್ಲ. ಲೈಂಗಿಕ ಕ್ರಿಯೆಗೆ ಅಸಮರ್ಥನೆಂದು ಸಂಬಂಧಿಕರ ಮುಂದೆಲ್ಲ ಹೇಳುತ್ತಿದ್ದಳು. ಇದರಿಂದ, ಹೊರ ಜಗತ್ತಿನಲ್ಲಿ ನನಗೆ ಸಾಕಷ್ಟು ಮುಜುಗರ ಉಂಟಾಗುತ್ತಿತ್ತು. ಪತ್ನಿಯೊಂದಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಮಾನಸಿಕ ಹಿಂಸೆ ನೀಡುತ್ತಿರುವ ಪತ್ನಿಯಿಂದ ವಿಚ್ಛೇದನ ನೀಡಬೇಕು ಎಂದು ಕೋರಿ ಪತಿ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು 2015ರ ಜು.17ರಂದು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿವಾಹದ ಸಂದರ್ಭದಲ್ಲಿ ಮಹಿಳೆ ಗಂಡನ ಮನೆಗೆ ಸ್ತ್ರೀಧನದ ರೂಪದಲ್ಲಿ ಕೊಂಡೊಯ್ಯುವ ಹಣವನ್ನು ವಿಚ್ಛೇದನದ ಬಳಿಕ ವಾಪಸ್ ಕೊಡಬೇಕು. ಮದುವೆ ಮುರಿದುಬಿದ್ದ ನಂತರವೂ ಸ್ತ್ರೀಧನದ ಮೇಲೆ ಪತಿಯ ಕುಟುಂಬಕ್ಕೆ ಹಕ್ಕು ಮಂಡಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ಮದುವೆ ವೇಳೆ ಪಡೆದಿದ್ದ 9 ಲಕ್ಷ ರೂ. ಸ್ತ್ರೀಧನವನ್ನು ಹಿಂದಿರುಗಿಸದ ಹಿನ್ನೆಲೆ ಯಲ್ಲಿ ನಂಬಿಕೆ ದ್ರೋಹದ ಆರೋಪದಲ್ಲಿ (ಐಪಿಸಿ ಸೆಕ್ಷನ್ 406) ಮಾಜಿ ಪತ್ನಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ವಿಚ್ಛೇದಿತ ಪತಿ ಮತ್ತವರ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಮದುವೆ ಸಂದರ್ಭದಲ್ಲಿ ಅರ್ಜಿದಾರ ಮತ್ತವರ ಕುಟುಂಬದವರಿಗೆ ದೂರುದಾರ ಮಹಿಳೆಯ ಮನೆಯವರು 9 ಲಕ್ಷ ರೂ. ನೀಡಿರುವುದು ಸತ್ಯವಾಗಿದೆ. ಆದ್ದರಿಂದ, ಆ ಹಣವನ್ನು ತಮ್ಮದೆಂದು ಹೇಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಅವರು ಶುದ್ಧಹಸ್ತರೆಂದು ಸಾಬೀತಾಗಬೇಕೆಂದರೆ ವಿಚಾರಣೆ ಎದುರಿಸಲೇಬೇಕು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ. ಅರ್ಜಿದಾರರು ಮಾಜಿ ಪತ್ನಿಗೆ ಜೀವನಾಂಶ ನೀಡಿದ್ದರೂ, ಮದುವೆ ಸಂದರ್ಭದಲ್ಲಿ ನೀಡಿದ್ದ ಹಣ ಮತ್ತು ಒಡವೆಗಳ ಮೇಲೆ ಪತಿಯ ಕುಟುಂಬುದವರು ಹಕ್ಕು ಮಂಡಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಪ್ರಕರಣವೇನು?: ಕರ್ನಾಟಕ ಮೂಲದ ಸದ್ಯ ಮುಂಬೈನಲ್ಲಿ ನೆಲೆಸಿರುವ ವ್ಯಕ್ತಿ ಹಾಗೂ ಬೆಂಗಳೂರಿನ ಮಹಿಳೆ 1998ರಲ್ಲಿ ಮದುವೆಯಾಗಿದ್ದರು. ಮದುವೆ ಮುಂಚೆ ಆಗಿದ್ದ ಒಪ್ಪಂದ ಪ್ರಕಾರ ವರನಿಗೆ ವಧುವಿನ ಮನೆಯವರು 9 ಲಕ್ಷ ರೂ. ಸ್ತ್ರೀಧನ ನೀಡಿದ್ದರು. 2001ರಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿ, ಪತ್ನಿ ಗಂಡನ ಮನೆ ತೊರೆದಿದ್ದರು. ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಮ್ಯಾಜಿಸ್ಟೇಟ್ ಕೊರ್ಟ್ನಲ್ಲಿ 2009ರಲ್ಲಿ ಖಾಸಗಿ ದೂರು ದಾಖಲಿಸಿದ್ದ ಪತ್ನಿ, ಮದುವೆ ಸಂದರ್ಭದಲ್ಲಿ ನೀಡಿದ್ದ 9 ಲಕ್ಷ ರೂ.ಗಳನ್ನು ಪತಿ ಹಿಂದಿರುಗಿಸಿಲ್ಲ ಎಂದು ಆರೋಪಿಸಿ, ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪತಿಯ ಕುಟುಂಬ ಸದಸ್ಯರೂ ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಮಧ್ಯೆ, 2014ರಲ್ಲಿ ಬಾಂಬೆ ಹೈಕೋರ್ಟ್ ದಂಪತಿಗೆ ವಿಚ್ಛೇದನ ನೀಡಿ, ಪತ್ನಿಗೆ 4 ಲಕ್ಷ ರೂ. ಕಾಯಂ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಮತ್ತೊಂದೆಡೆ, 2015ರಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೊರ್ಟ್, ಪತ್ನಿ ದಾಖಲಿಸಿದ್ದ ದೂರಿನಲ್ಲಿ ಆರೋಪಗಳನ್ನು ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಈ ಪ್ರಕರಣ ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.