ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿಯ ಹಿಂಭಾಗದಲ್ಲಿ ಸೃಷ್ಟಿಯಾಗಿದ್ದ ಕೃತಕ ನೆರೆಗೆ ಗುರುವಾರ ಮುಕ್ತಿ ಸಿಕ್ಕಿದೆ. ಬಂಟ್ವಾಳ ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಸಂಸ್ಥೆ ಜಂಟಿಯಾಗಿ ಕಾರ್ಯ ನಿರ್ವಹಿಸಿ ಚರಂಡಿಯಲ್ಲಿ ನೀರು ಹರಿದು ಹೋಗಲು ಇದ್ದ ಅಡ್ಡಿಯನ್ನು ಜೆಸಿಬಿ ಮೂಲಕ ತೆರವು ಗೊಳಿಸಿದ ಬಳಿಕ ಕೈಕುಂಜೆ ಬಳಿ ಹಲವು ದಿನಗಳಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದ ನೀರು ಹರಿದು ಹೋಗಿದೆ.
ಕೈಕುಂಜೆಯಲ್ಲಿ ನೀರು ನಿಂತಿದ್ದರೂ ಸಮಸ್ಯೆಯ ಮೂಲ ಬಿ.ಸಿ.ರೋಡಿನ ರಿಕ್ಷಾ ಭವನದ ಮುಂಭಾಗದಲ್ಲಿದ್ದ ಇಳಿಜಾರು ಗುಂಡಿಯಲ್ಲಿತ್ತು. ಕೈಕುಂಜೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದ ಕೂಡಲೇ ಸ್ಪಂದಿಸಿದ ಬಂಟ್ವಾಳ ಪುರಸಭೆ ಬುಧವಾರ ಹಿಟಾಚಿ ಮೂಲಕ ನೀರು ಹರಿದು ಹೋಗಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಸಮಸ್ಯೆ ಮೂಲ ಇಳಿಜಾರು ಹೊಂಡದ ಬಳಿ ಇರುವುದನ್ನು ಅರಿತು ಪುರಸಭೆಯ ಸದಸ್ಯ ಗೋವಿಂದ ಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಹಾಗೂ ಸಿಬ್ಬಂದಿ ಕೆಎನ್‌ಆರ್ ಸಂಸ್ಥೆಯ ದೊಡ್ಡ ಜೆಸಿಬಿಯನ್ನು ಬಳಸಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭ ನೀರು ಹರಿದು ಹೋಗುವ ಚರಂಡಿಗೆ ಯಾರೋ ತಂದು ಹಾಕಿದ್ದ ತೆಂಗಿನ ಮರದ ಕಾಂಡ ಸಿಲುಕಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೇ ಮಳೆ ನೀರೆಲ್ಲಾ ತಗ್ಗು ಪ್ರದೇಶದಲ್ಲಿ ತುಂಬಿಕೊಂಡಿತ್ತು. ತೆಂಗಿನ ಮರದ ಕಾಂಡವನ್ನು ತೆರವುಗೊಳಿಸಿದ ಬಳಿಕ ನೀರು ಹರಿದು ಹೋಗಿ ಕೈಕುಂಜೆಯ ಮೆಸ್ಕಾಂ ಕಚೇರಿಯ ಹಿಂಭಾಗದಲ್ಲಿ ನಿಂತಿದ ನೀರು ಇಳಿದು ಹೋಗಿದೆ.
ಮೆಸ್ಕಾಂ ಕಚೇರಿಯ ಹಿಂಭಾಗ ಕೃತಕ ನೆರೆ ಸೃಷ್ಟಿಯಾಗಿರುವ ಬಗ್ಗೆ ವಿಜಯವಾಣಿ ಬುಧವಾರದ ಸಂಚಿಕೆಯಲ್ಲಿ ಕೈಕುಂಜೆಯಲ್ಲಿ ಕೃತಕ ನೆರೆ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಇಲಾಖಾಧಿಕಾರಿಗಳ ಗಮನ ಸೆಳೆದಿತ್ತು.
ಕಳೆದ ಹಲವು ದಿನಗಳಿಂದ ನೀರು ನಿಂತಲ್ಲೇ ಇದ್ದುದರಿಂದ ಇಂದು ನೀರು ಹರಿಯುತ್ತಿದ್ದಂತೆಯೇ ಪರಿಸರವಿಡೀ ದುರ್ವಾಸನೆ ಬೀರಲಾರಂಭಿದೆ. ಕೊಳೆತ ವಾಸನೆಯಿಂದಾಗಿ ಸ್ಥಳೀಯ ನಿವಾಸಿಗಳು ಮನೆಯೊಳಗೂ ಮೂಗು ಮುಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.