ಜಿಲ್ಲೆ

ಕಡಲ ತೀರದ 1 ಕಿಮೀ ವ್ಯಾಪ್ತಿಯಲ್ಲಿ 1.40 ಕ್ವಿಂಟಾಲ್‌ ಮದ್ಯದ ಬಾಟಲಿಗಳು

ಕಾರವಾರ: ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ದೇಶದ 17 ಕಡಲ ತೀರಗಳಲ್ಲಿ ಗುರುವಾರ ಏಕಕಾಲದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಆನ್‌ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಾರವಾರದ ಟ್ಯಾಗೋರ್‌ ಕಡಲ ತೀರವನ್ನೂ ಸ್ವಚ್ಛ ಮಾಡಲಾಯಿತು.

ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ 60 ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಬೆಳಗ್ಗೆ 7 ರಿಂದ 9.30 ರವರೆಗೆ ಟ್ಯಾಗೋರ್ ಕಟಲ ತೀರದಲ್ಲಿ 1 ಕಿಮೀ ವ್ಯಾಪ್ತಿಯಲ್ಲಿ 566 ಕೆಜಿ ಕಸ ಸಂಗ್ರಹಿಸಿದರು.

ಅದರಲ್ಲಿ 140 ಕೆಜಿ ಗಾಜಿನ ಮಧ್ಯದ ಬಾಟಲಿಗಳು, 70 ಕೆಜಿ ಡೈಪರ್, 83 ಕೆಜಿ ಇತರೆ ವಿವಿಧ ಪ್ಲಾಸ್ಟಿಕ ವಸ್ತುಗಳು, 28 ಕೆಜಿ ಚಪ್ಪಲಿ ಮತ್ತು ಶೂಗಳು, ಆಹಾರ ಪೊಟ್ಟಗಳು, 5 ಕೆಜಿ ಗಾಜಿನ ಬಾಟಲಿಗಳು, 4 ಕೆಜಿ ಪ್ಲಾಸ್ಟಿಕ್ ಕಪ್, 5 ಕೆಜಿ ಥರ್ಮೊಕೊಲ ಇತ್ಯಾದಿ ತ್ಯಾಜ ವಸ್ತುಗಳಿದ್ದವು.

ಜನರಲ್ಲೂ ಅರಿವು ಅಗತ್ಯ: ಪ್ಲಾಸ್ಟಿಕ್ ಹಾಗೂ ಇತರ ಮಣ್ಣಿನಲ್ಲಿ ಸಹಜವಾಗಿ ಕರಗದೇ ಇರುವ ವಸ್ತುಗಳಿಂದ ಉಂಟಾಗಬಹುದಾದ ತೊಂದರೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಿದ್ದ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕೇವಲ ಸರ್ಕಾರಿ ಇಲಾಖೆ ಅಧಿಕಾರಿಗಳ ಕೆಲಸವಾಗದೆ ಜನಸಾಮಾನ್ಯರು ಕ್ರೀಯಾತ್ಮಕವಾಗಿ ಪಾಲ್ಗೊಂಡಾಗ ಮಾತ್ರ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಯಶಸ್ವಿಯಾಗಿಸಬಹುದು ಎಂದರು.

ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಜಗನ್ನಾಥ ಎಲ್.ರಾಠೋಡ್, ಎಸಿಎಫ್ ಜಯೇಶ್ ಸಾಗರ ಮಾಲಿನ್ಯದ ಕುರಿತು ಮಾತನಾಡಿದರು.
ಆಡಳಿತಾಽಕಾರಿ ಶಾಹಿನ್ ಶೇಖ್, ಪ್ರಾಧ್ಯಾಪಕ ಡಾ. ಶಿವಕುಮಾರ ಹರಗಿ, ಆರ್‌ಎಫ್‌ಒ ಪ್ರಮೋದ ನಾಯಕ, ಅನು ನಾಯರ್, ಡಾ.ಗುಲ್ನಾಪ್, ಡಾ. ಪ್ರಜ್ಞಾ ಬಾಂದೇಕರ, ಡಾ.ಶ್ರೀದೇವಿ ಹಕ್ಕಿಮನಿ,ಸುಜಲ ರೇವಣಕರ್, ಸೂರಜ ಪೂಜಾರ, ಶಾನವಾಜ ಕಡಪ, ರಾಮು ರಾಠೋಡ ಇದ್ದರು.