ಕೊಟ್ಟೂರಿನಲ್ಲಿ ಏರ್ಪಡಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗಿ ರಾಜೇಂದ್ರ ಸ್ವಾಮಿ, ತಹಸೀಲ್ದಾರ್ ಅಮರೇಶ, ಸಮದ್ ಕೊಟ್ಟೂರು, ಶಿವಶಂಕರ್ ಬಣಗಾರ್ ಇನ್ನಿತರರಿದ್ದರು. 
ಜಿಲ್ಲೆ

ಒಂದು ಫೋಟೋ ನೂರಾರು ಪದಗಳಿಗೆ ಸಮ

ಕೊಟ್ಟೂರು: ಮೊಬೈಲ್‌ನಲ್ಲಿ ಉತ್ಕೃಷ್ಟವಾದ ಕ್ಯಾಮರಾ ಅಳವಡಿಕೆಯಿಂದ ವೃತ್ತಿಪರ ಛಾಯಾಗ್ರಾಹಕರ ಬದುಕಿಗೆ ಸಂಕಷ್ಟವಾಗಿದೆ ಎಂದು ತಹಸೀಲ್ದಾರ್ ಅಮರೇಶ ಹೇಳಿದರು.

ಛಾಯಾಗ್ರಾಹಣ ಶ್ರೀಮಂತ ಕಲೆ

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುಬಸವೇಶ್ವರ ಫೋಟೋ ಮತ್ತು ವೀಡಿಯೋಗ್ರಾಹಕರ ತಾಲೂಕು ಸಂಘ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಾಹಕರ ದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಛಾಯಾಗ್ರಾಹಣ ಶ್ರೀಮಂತ ಕಲೆ, ಬದುಕಿನ ಸುಂದರ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತದೆ. ಅನೇಕ ಐತಿಹಾಸಿಕ ಘಟನೆಗಳ ಫೋಟೋಗಳು ಇಂದಿಗೂ ಸಾಕ್ಷಿಯಾಗಿವೆ ಎಂದರು.

ಮಹಾಯುದ್ಧದ ಪೋಟೋಗಳು ಕರಾಳತೆಯನ್ನು ತೋರಿಸುವ ಸಾಕ್ಷಿ

ನೂರಾರು ಶಬ್ಧಗಳನ್ನು ವಿವರಿಸುವುದನ್ನು ಒಂದು ಸುಂದರ ಫೋಟೋ ತಿಳಿಸಲಿದೆ. ಆದ್ದರಿಂದ ಫೋಟೋಗಳಿಗೆ ಹೆಚ್ಚಿನ ಮಹತ್ವವಿದೆ. 1 ಮತ್ತು 2 ನೇ ಮಹಾಯುದ್ಧದ ಪೋಟೋಗಳು ಕರಾಳತೆಯನ್ನು ತೋರಿಸುವ ಸಾಕ್ಷಿಗಳಾಗಿವೆ ಎಂದರು.

ಸ್ವಯಂ ಉದ್ಯೋಗದ ಕಲ್ಪಿಸಿದ ಛಾಯಾಗ್ರಾಹಣ

ಪಕ್ಷಿ ತಜ್ಞ ಹಾಗೂ ಛಾಯಾಗ್ರಾಹಕ ಸಮದ್ ಕೊಟ್ಟೂರು, ಕೋಟ್ಯಂತರ ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಬದುಕನ್ನು ರೂಪಿಸಿದ ಕಲೆ ಛಾಯಾಗ್ರಹಣ. ಛಾಯಾಗ್ರಾಹಕ ಅಲೆಗ್ಸಾಂಡರ್ ಗೀನ್ ಲಾ ಅವರು ನೂರು ವರ್ಷಗಳ ಹಿಂದೆ ತೆಗೆದ ಹಂಪಿಯ ಫೋಟೋಗಳು ಜಗತ್ತಿನಾದ್ಯಂತ ಕಾಣಬಹುದು ಎಂದರು.

ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ್ ಬಣಗಾರ್, ಇಂದಿನ ಮೊಬೈಲ್ ತಂತ್ರಜ್ಞಾನ ವೃತ್ತಿಪರ ಛಾಯಾಗ್ರಾಹಕರ ಆದಾಯಕ್ಕೆ ಅಡ್ಡಿಯಾಗಿ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಕಟ್ಟಿಮನಿ ಹಿರೇಮಠದ ಯೋಗಿರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಕೆ.ಜಿ. ಕೊಟ್ರೇಶ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಅಧ್ಯಕ್ಷ ಬಂಡ್ರಿ ಗಂಗಾಧರ, ಕ್ಯಾಮರಾ ತಜ್ಞ ಪಿ.ಎಸ್. ಯೋಗೀಶ, ರಾಮಣ್ಣ, ಸಂತೋಷ ಕುಮಾರ್, ಅಕ್ಷರ, ಕಾವ್ಯಾ, ಬಂಡ್ರಿ ಕಾಳೇಶ, ಉಜ್ಜಿನಿ ರವಿಕುಮಾರ್ ಇನ್ನಿತರರಿದ್ದರು.