ಬಂಟ್ವಾಳ: ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠನಗೊಳಿಸುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ಸರ್ಕಾರದ ಈ ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯಿಂದ ಹೊರಗುಳಿದ ಅರ್ಹರನ್ನು ಗುರುತಿಸಿ ವಲಯ ಮಟ್ಟದಲ್ಲಿ ಶಿಬಿರ ಹಮ್ಮಿಕೊಳ್ಳುವ ಬಗ್ಗೆ ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಿರ್ಣಯಿಸಿದೆ ಎಂದು ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡುವರು. ನೋಂದಣಿಗೆ ಬಾಕಿಯಿರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಮಾಡಲಾಗುವುದು, ಸಮಾಜದ ಪ್ರತಿಯೊಬ್ಬರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಅರ್ಹರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ನ.19ರಂದು ಕಾವಳಪಡೂರು, ಕಾವಳಮುಡೂರು, ಉಳಿ, ಮಣಿನಾಲ್ಕೂರು, ನಾವೂರು, ಬಡಗಕಜೆಕಾರು, ಸರಪಾಡಿ ಗ್ರಾಮಗಳಿಗೆ ಸಂಬಂಧಪಟ್ಟಂತೆ ಮಣಿನಾಲ್ಕೂರು ಗ್ರಾ.ಪಂ.ನಲ್ಲಿ, ನ.26ರಂದು ಅನಂತಾಡಿ, ಪೆರಾಜೆ, ನೆಟ್ಲಮುಡ್ನೂರು, ಬರಿಮಾರು, ಮಾಣಿ, ಕಡೇಶ್ವಾಲ್ಯ, ಕೆದಿಲ, ಪೆರ್ನೆ ಗ್ರಾಮಗಳಿಗೆ ಸಂಬಂಧಪಟ್ಟಂತೆ ಮಾಣಿ ಗ್ರಾ.ಪಂ.ನಲ್ಲಿ, ನ.27ರಂದು ಬಂಟ್ವಾಳ ಪುರಸಭೆಯ 27 ವಾರ್ಡ್‌ಗಳಿಗೆ ಸಂಬಂಧಪಟ್ಟಂತೆ ಪುರಸಭಾ ಕಚೇರಿಯಲ್ಲಿ, ಡಿ.5ರಂದು ಬಾಳ್ತಿಲ, ಗೋಳ್ತಮಜಲು, ವೀರಕಂಭ, ಬೋಳಂತೂರು ಗ್ರಾಮಗಳಿಗೆ ಸಂಬಂಧಪಟ್ಟಂತೆ ಬೋಳಂತೂರು ಗ್ರಾ.ಪಂ.ನಲ್ಲಿ, ಡಿ.10ರಂದು ಇರ್ವತ್ತೂರು, ಪಿಲಾತಬೆಟ್ಟು, ಚೆನ್ನೈತ್ತೋಡಿ, ಕುಕ್ಕಿಪ್ಪಾಡಿ, ಸಂಗಬೆಟ್ಟು, ರಾಯಿ, ಪಂಜಿಕಲ್ಲು, ಅರಳ ಗ್ರಾಮಗಳಿಗೆ ಸಂಬಂಧಪಟ್ಟಂತೆ ಚೆನ್ನೈತ್ತೋಡಿ ಗ್ರಾ.ಪಂ.ನಲ್ಲಿ, ಡಿ.13ರಂದು ಅಳಿಕೆ, ಕನ್ಯಾನ, ಕರೋಪಾಡಿ, ಮಾಣಿಲ, ಪೆರುವಾಯಿ, ಪುಣಚ, ಕೇಪು ಗ್ರಾಮಗಳಿಗೆ ಸಂಬಂಧಪಟ್ಟಂತೆ ಕನ್ಯಾನ ಗ್ರಾ.ಪಂ.ನಲ್ಲಿ, ಡಿ.17ರಂದು ನರಿಕೊಂಬು, ಸಜೀಪಮೂಡ, ಸಜೀಪಮುನ್ನೂರು ಗ್ರಾ.ಪಂ.ಗಳಿಗೆ ಸಂಬಂಧಪಟ್ಟಂತೆ ಸಜೀಪಮುನ್ನೂರು ಗ್ರಾ.ಪಂ.ನಲ್ಲಿ, ಡಿ.21ರಂದು ಇಡ್ಕಿದು, ವಿಟ್ಲಪಡ್ನೂರು, ವಿಟ್ಲಮುಡ್ನೂರು ಗ್ರಾಮಗಳಿಗೆ ಸಂಬಂಧಪಟ್ಟಂತೆ ವಿಟ್ಲಪಡ್ನೂರು ಗ್ರಾ.ಪಂ.ನಲ್ಲಿ, ಡಿ.27ರಂದು ಅಮ್ಟಾಡಿ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಕಳ್ಳಿಗೆ, ತುಂಬೆ, ಪುದು, ಮೇರಮಜಲು ಗ್ರಾಮಗಳಿಗೆ ಸಂಬಧಪಟ್ಟಂತೆ ಕರಿಯಂಗಳ ಗ್ರಾ.ಪಂ.ನಲ್ಲಿ, ಡಿ.31ರಂದು ಸಾಲೆತ್ತೂರು, ಮಂಚಿ, ಕೊಳ್ನಾಡು ಗ್ರಾ.ಪಂ.ಗಳಿಗೆ ಸಂಬಂಧಪಟ್ಟಂತೆ ಸಾಲೆತ್ತೂರು ಗ್ರಾ.ಪಂ.ನಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಐಡಾ ಸುರೇಶ್, ಚಂದ್ರಶೇಖರ್ ಆಚಾರ್ಯ, ಸಿರಾಜ್ ಮೊಹಮ್ಮದ್, ಸತೀಶ್ ಕುಮಾರ್, ಕೃಷ್ಣಪ್ಪ ಪೂಜಾರಿ ನರಿಕೊಂಬು ಉಪಸ್ಥಿತರಿದ್ದರು.