ಜಿಲ್ಲೆ

ಆನ್​ಲೈನ್​ ಬೆಟ್ಟಿಂಗ್​ ಬ್ಯಾನ್ ಮಾಡುವಂತೆ ಇಳಕಲ್​ ಸೀರೆ ನೇಯುವ ಮೂಲಕ ಪ್ರಧಾನಿ ಮೋದಿಗೆ ಮನವಿ ಮಾಡಿದ ಯುವಕ; Online Betting

ಬಾಗಲಕೋಟೆ: ಆನ್​ಲೈನ್ ಬೆಟ್ಟಿಂಗ್ಅನ್ನು (Online Betting) ಬ್ಯಾನ್ ಮಾಡುವಂತೆ ಆಗ್ರಹಿಸಿ ಯುವಕನೋರ್ವ ಇಳಕಲ್​ ಸೀರೆ ಮೇಲೆ ಇಂಗ್ಲೀಷ್​ನಲ್ಲಿ ನೇಯುವ ಮೂಲಕ ಪ್ರಧಾನಿ ಮೋದಿಗೆ ವಿನೂತನವಾಗಿ ಮನವಿ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್​ನಲ್ಲಿ ನಡೆದಿದೆ.

ಇಳಕಲ್ ನಗರದ ನಿವಾಸಿ ಮೇಘರಾಜ್ ಗುದ್ದಟ್ಟಿ ಬ್ಯಾನ್​ ರಮ್ಮಿ ಮತ್ತು ಡ್ರೀಮ್​ 11 ಎಂದು ಸೀರೆ ಮೇಲೆ ನೇಯುವ ಮೂಲಕ ಪ್ರಧಾನಿಗೆ ವಿಭಿನ್ನವಾಗಿ ಮನವಿ ಮಾಡಿದ್ಧಾರೆ. ಸದ್ಯ ಯುವಕನ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಗ್ಗೆ ಮಾತನಾಡಿರುವ ಯುವಕ ಮೇಘರಾಜ್ ಗುದ್ದಟ್ಟಿ, ಆನ್​ಲೈನ್ ಜೂಜಾಟದಿಂದ (Online Betting) ಅನೇಕ ಕುಟುಂಬಗಳು ಬೀದಿಗೆ ಬಂದಿದೆ. ಇದರಿಂದಾಗಿ ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಜೂಜಾಟ ಬ್ಯಾನ್ ಮಾಡಬೇಕೆಂದು ಈ ವಿಶೇಷ ಸೀರೆಯನ್ನು ನೇಯ್ಗೆ ಮಾಡಲಾಗಿದೆ. ಈ ಸೀರೆಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವ ಆಲೋಚನೆ ಇದೆ ಎಂದು ಯುವಕ ಮೇಘರಾಜ್ ಗುದ್ದಟ್ಟಿ ತಿಳಿಸಿದ್ದಾರೆ.

ಈ ಹಿಂದೆ ಇಳಕಲ್​ನಲ್ಲಿ ಅಯೋಧ್ಯೆ ಶ್ರೀರಾಮನ ಸೀರೆಯನ್ನು ನೇಯುವ ಮೂಲಕ ಯುವಕ ಮೇಘರಾಜ್ ಗಮನ ಸೆಳೆದಿದ್ದರು. ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ಕೋರಿ ಯುವಕ ಮೇಘರಾಜ್ ಸೀರೆಯನ್ನು ನೇಯ್ದಿದ್ದರು. ಪುನೀತ್ ರಾಜಕುಮಾರ ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲೆಂದು ಮತ್ತು ಕಾಂತಾರಾ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲಿ ಎಂದು ಸೀರೆಯಲ್ಲಿ ನೇಯ್ಗೆ ಮಾಡಿ ಮೇಘರಾಜ್ ಶುಭಹಾರೈಸಿದ್ದರು.