ಹಾಸನ: 'ಮಾತು ಮುತ್ತು, ಮಾತೇ ಮೃತ್ಯು' ಎಂಬ ಮಾತು ಇಲ್ಲಿ ಬಹುತೇಕ ನಿಜವಾಗಿದೆ. ಏಕೆಂದರೆ ಇಲ್ಲೊಬ್ಬನ ಬುದ್ಧಿಮಾತೇ ಆತನ ಜೀವಕ್ಕೆ ಮುಳುವಾಗಿಹೋಗಿದೆ. ಇಂಥದ್ದೊಂದು ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಹಳೇಬೀಡು ವ್ಯಾಪ್ತಿಯ ವಡ್ಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ 50 ವರ್ಷದ ವ್ಯಕ್ತಿಯನ್ನು 27 ವರ್ಷದ ಯುವಕ ಕೊಲೆ ಮಾಡಿದ್ದಾನೆ. ಸೋಮಣ್ಣ ಕೊಲೆಗೀಡಾದ ವ್ಯಕ್ತಿ, ಯಶ್ವಂತ್ ಕೊಲೆ ಆರೋಪಿ.
ಆರೋಪಿ ಯಶ್ವಂತ್ ತನ್ನ ಗ್ರಾಮದಲ್ಲಿ ಗಲಾಟೆ ಮಾಡುವ ಜತೆಗೆ ಅಕ್ರಮವಾಗಿ ಮದ್ಯ ಮಾರಾಟವನ್ನೂ ಮಾಡುತ್ತಿದ್ದು, ಈತನ ಮೇಲೆ ಹಲವಾರು ಪ್ರಕರಣಗಳು ಕೂಡ ಇವೆ. ಇವನ್ನೆಲ್ಲ ಬಿಟ್ಟುಬಿಡುವಂತೆ ಸೋಮಣ್ಣ ಆಗಾಗ ಯಶ್ವಂತ್ಗೆ ಬುದ್ಧಿಮಾತು ಹೇಳುತ್ತಿದ್ದ. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇವರಿಬ್ಬರ ಮಧ್ಯೆ ಕುಡಿದ ಮತ್ತಿನಲ್ಲಿ ಜಗಳ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಯಶ್ವಂತ್ ಕೊಡಲಿಯನ್ನು ಬೀಸಿ ಸೋಮಣ್ಣನನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.