ವಿಜಯವಾಣಿ ಸುದ್ದಿಜಾಲ ಸುಳ್ಯ
ಮಕ್ಕಳು ಕ್ರಿಯಾತ್ಮಕವಾಗಿ ಮತ್ತು ಸ್ವತಂತ್ರವಾಗಿ ಯೋಚಿಸುವಂತಾಗಬೇಕು. ಅದಕ್ಕೆ ಮಕ್ಕಳನ್ನು ಭಯ ಮುಕ್ತ ವಾತಾವರಣದಲ್ಲಿ ಬೆಳೆಸಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಕಚೇರಿ ಹಾಗೂ ಸುಂದರ ಭಾರತ ಟ್ರಸ್ಟ್ ಆಶ್ರಯದಲ್ಲಿ ಸುಳ್ಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಯುವಜನರಿಗೆ ಉದ್ಯೋಗ ಉದ್ದಿಮೆಯ ಅವಕಾಶ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡುವ ‘ಯುವ್ವಿಕಾಸ’ ಯುವ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಭಾಗವಹಿಸಿದ್ದರು. ಸುಂದರ ಭಾರತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ.ಪರಾಶರ್ ಸ್ವಾಗತಿಸಿದರು. ಸುಂದರ ಭಾರತ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳಿಗೆ ನೋಟ್‌ಬುಕ್ ವಿತರಿಸಲಾಯಿತು.
ಮಾಹಿತಿ ಕಾರ್ಯಾಗಾರ
ಯುವಜನರಿಗೆ, ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳು, ಹೊಸ ಉದ್ದಿಮೆ, ಸ್ಟಾರ್ಟಪ್ ಪ್ರಾರಂಭಿಸುವುದು, ಎಐ ಯುಗದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಗಳು, ಇಂಜಿನಿಯರಿಂಗ್ ಕಲಿಯದವರಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳು ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಕ್ಷೇತ್ರದ ಪರಿಣತರಾಗಿರುವ ಮಹಂತೇಶ್ ಕಟಗೇರಿ, ಬಿಪಿಒ ಕ್ಷೇತ್ರದ ಕುರಿತು ಪ್ರಸನ್ನ ಕೃಷ್ಣಯ್ಯ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹರೀಶ್ ಕುಮಾರ್, ಎಐ ಉದ್ಯೋಗಾವಕಾಶಗಳ ಭಾರತೀಯ ಆಡಳಿತ ಫೆಲೋ ಹಾಗೂ ಸುಂದರ ಭಾರತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ.ಪರಾಶರ್ ಮಾಹಿತಿ ನೀಡಿದರು.