ಜಿಲ್ಲೆ

ಬೆಂಗಳೂರಿನ ಈ ಬೈಕ್​ ಟ್ಯಾಕ್ಸಿ ಸವಾರನ 1 ತಿಂಗಳ ಸಂಪಾದನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Bike Taxi

Bike Taxi : ಆಟೋ ಮತ್ತು ಕಾರುಗಳಂತೆ ಇಂದು ಬೈಕ್​ ಟ್ಯಾಕ್ಸಿ ಕೂಡ ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಬೈಕ್​ ಟ್ಯಾಕ್ಸಿ ಸೇವೆಗಳು ಕೂಡ ಇಂದು ಸಾಕಷ್ಟು ಮಂದಿಗೆ ಉದ್ಯೋಗ ಕೊಟ್ಟಿದೆ. ಉತ್ತಮ ರೈಡಿಂಗ್ ಅಥವಾ ಡ್ರೈವಿಂಗ್ ಕೌಶಲ್ಯ ಹೊಂದಿರುವವರು ಬೈಕ್​ ಟ್ಯಾಕ್ಸಿ ಕೆಲಸಕ್ಕೆ ಸೇರಬಹುದು ಮತ್ತು ತಕ್ಷಣವೇ ಹಣವನ್ನು ಗಳಿಸಲು ಪ್ರಾರಂಭಿಸಬಹುದು.

ರ್ಯಾಪಿಡೋ ಮತ್ತು ಉಬರ್​ ಕಂಪನಿಗಳು ಆಟೋ ಮತ್ತು ಕಾರುಗಳಂತೆ ಬೈಕ್​ ಟ್ಯಾಕ್ಸಿ ಸೇವೆಯನ್ನು ನೀಡುತ್ತಿವೆ. ಈ ಕಂಪನಿಗಳಲ್ಲಿ ಸವಾರರಾಗಿ ಎಷ್ಟು ಹಣವನ್ನು ಗಳಿಸುತ್ತಾರೆ ಎಂಬುದು ಎಲ್ಲರಿಗೂ ನಿಗೂಢವಾಗಿದೆ. ಆದರೆ, ಇತ್ತೀಚೆಗೆ, ಸವಾರರೊಬ್ಬರು ತಮ್ಮ ತಿಂಗಳ ಆದಾಯವನ್ನು ಬಹಿರಂಗಪಡಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್​ ವಿಡಿಯೋದಲ್ಲಿ ಬೆಂಗಳೂರಿನ ಯುವಕನೊಬ್ಬ ತಾನು Uber ಮತ್ತು Rapido ಕಂಪನಿಯಲ್ಲಿ ಬೈಕ್ ಟ್ಯಾಕ್ಸಿಯನ್ನು ಓಡಿಸುವ ಮೂಲಕ ತಿಂಗಳಿಗೆ 80,000 ರಿಂದ 85,000 ರೂ. ಗಳಿಸುತ್ತಿದ್ದೇನೆ ಎಂದಿದ್ದಾನೆ. ಅದು ಕೂಡ ದಿನಕ್ಕೆ 13 ಗಂಟೆ ದುಡಿದು ಇಷ್ಟೊಂದು ಸಂಪಾದನೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಇದನ್ನು ಕೇಳಿದವರೆಲ್ಲರೂ ಒಂದು ಕ್ಷಣ ಹುಬ್ಬೇರಿಸಿದ್ದಾರೆ. ಏಕೆಂದರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ, ಎಸಿ ರೂಂಗಳಲ್ಲಿ ಕೆಲಸ ಮಾಡುವವರೂ ಇಷ್ಟು ದುಡಿಯುವುದು ಕಷ್ಟ. ಹೀಗಿರುವಾಗ ಬೈಕ್ ಟ್ಯಾಕ್ಸಿ ಸವಾರ ಇಷ್ಟು ಸಂಪಾದನೆ ಮಾಡುತ್ತಿರುವುದು ಹಲವರ ಕಣ್ಣನ್ನು ಕೆಂಪಾಗಿಸಿದೆ.

ವೈರಲ್​​​​ ವಿಡಿಯೋವನ್ನು ಕಳೆದ ಡಿಸೆಂಬರ್ 4ರಂದು @karnatakaportf ಹೆಸರಿನ ಎಕ್ಸ್​ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ ಅನೇಕರನ್ನು ಆಕರ್ಷಿಸಿದೆ. ಇದುವರೆಗೂ 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಈ ವಿಡಿಯೋಗೆ ಅನೇಕರು ಕಾಮೆಂಟ್​ ಮಾಡಿದ್ದು, ಬೈಕ್​ ಸವಾರ ತುಂಬಾ ಕಷ್ಟಪಡುತ್ತಿದ್ದಾನೆ ಎಂದು ಕೆಲವರು ಹೊಗಳುತ್ತಿದ್ದಾರೆ. ಇನ್ನು ಕೆಲವರು ದಿನಕ್ಕೆ 13 ಗಂಟೆ ಬೈಕ್ ಓಡಿಸುವುದು ತುಂಬಾ ಕಷ್ಟ ಎಂದಿದ್ದಾರೆ.

ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ಅದಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಎಲ್ಲ ಸವಾರರು ಇದೇ ಶ್ರೇಣಿಯಲ್ಲಿ ಹಣ ಗಳಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಹೊಸದಾಗಿ ಸೇರುವ ಸವಾರರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಹೆಚ್ಚಿನ ಸವಾರಿ ಸಿಗುತ್ತದೆ. ಆದರೆ, ಕೆಲವು ದಿನಗಳ ನಂತರ ಇದೆಲ್ಲವೂ ಕಡಿಮೆಯಾಗುತ್ತದೆ. ಕಡಿಮೆ ರೈಡ್‌ಗಳು ಸಹ ಇರುತ್ತವೆ. ಇದರಿಂದ ಗಳಿಕೆ ಗಣನೀಯವಾಗಿ ಕುಸಿಯುತ್ತದೆ. ಕಮಿಷನ್ ಕೂಡ ಗಣನೀಯವಾಗಿ ಕಡಿತಗೊಳ್ಳಲಿದೆ. ತೆರಿಗೆಯನ್ನೂ ಕಟ್ಟಬೇಕು. ಆದರೆ, ಇದನ್ನೆಲ್ಲ ಸಹಿಸಿಕೊಂಡು ಈ ಸವಾರನಂತೆ ಕಷ್ಟಪಟ್ಟು ದುಡಿಯುವುದರಿಂದ ಯಾರು ಬೇಕಾದರೂ ಒಳ್ಳೆಯ ಆದಾಯ ಗಳಿಸಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)