ಜಿಲ್ಲೆ

ಯೋಗೀಶ್​ ಗೌಡ ಕೊಲೆ ಪ್ರಕರಣ: 2ನೇ ದಿನವೂ ವಿಚಾರಣೆಗೆ ಹಾಜರಾದ ಪತ್ನಿ ಮಲ್ಲಮ್ಮ

Webdesk - Ravikanth

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣ ಸಂಬಂಧ ಎರಡನೇ ದಿನವೂ ಸಿಬಿಐ ವಿಚಾರಣೆ ಮುಂದುವರಿದಿದ್ದು, ಪತ್ನಿ ಮಲ್ಲಮ್ಮ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಿ, ಆರೋಪಿಗಳ ಕುರಿತಂತೆ ಪೂರಕ ಮಾಹಿತಿ ಪಡೆಯಲಾಯಿತು.

ಧಾರಾವಾಡ ಉಪನಗರ ಠಾಣೆಗೆ ಮಧ್ಯಾಹ್ನ ಹಾಜರಾಗಿದ್ದ ಮಲ್ಲಮ್ಮ, ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದರು. ನಿನ್ನೆಯೂ ಇವರು ವಿಚಾರಣೆಯನ್ನು ಎದುರಿಸಿದ್ದು, ಇಂದು ವಿಚಾರಣೆ ಅಂತ್ಯಗೊಂಡಿದೆ ಎನ್ನಲಾಗಿದೆ.

ಈ ನಡುವೆ ನಿನ್ನೆಯಷ್ಟೇ ಬಂಧನಕ್ಕೆ ಒಳಗಾಗಿದ್ದ ಆರೋಪಿ, ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ಮಧ್ಯೆ ಸಂಬಂಧಿಕರು ಸೋಮು ಅವರನ್ನು ನೋಡಲು ಠಾಣೆ ಬಳಿ ಆಗಮಿಸಿದ್ದರು.

ಹತ್ಯೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಅವರನ್ನು ಕೂಡ ಇಂದು ಸಿಬಿಐ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದೇನೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಬಹಿರಂಗವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ್ದಾರೆ.