ಗಂಗೊಳ್ಳಿ: ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ. ಒಬ್ಬ ಆರೋಗ್ಯವಂತನಾಗಿದ್ದಾನೆ ಎಂದರೆ ಅವನಷ್ಟು ಶ್ರೀಮಂತ ಯಾರೂ ಇಲ್ಲ. ದೈಹಿಕವಾಗಿ, ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಸದೃಢರಾಗಿರಲು ಯೋಗ ಸಹಕಾರಿಯಾಗುತ್ತದೆ ಎಂದು ಯೋಗ ತರಬೇತುದಾರ ಆಟಕೆರೆ ಬಾಬು ಪೈ ಕೋಟೇಶ್ವರ ಹೇಳಿದರು.
ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಆಶ್ರಯದಲ್ಲಿ ಶ್ರೀ ಶಾರದೋತ್ಸವದ ಸುವರ್ಣ ಸಂಭ್ರಮ-2024ರ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಆಯೋಜಿಸಲಾಗಿರುವ ಹತ್ತು ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗಂಗೊಳ್ಳಿಯ ವೈದ್ಯ ಡಾ.ಮಹೇಶ ಜಿ. ಅಧ್ಯಕ್ಷತೆ ವಹಿಸಿ, ಯೋಗಾಭ್ಯಾಸ ಮಾಡುವುದರಿಂದ ದೇಹದಲ್ಲಿ ಚೈತನ್ಯ ವೃದ್ಧಿಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದರು.
ಗಂಗೊಳ್ಳಿ ಪಂಜುರ್ಲಿ ದೈವಸ್ಥಾನ ಆಡಳಿತ ಮೊಕ್ತೇಸರ ಪುರುಷೋತ್ತಮ ಆರ್ಕಾಟಿ ಶಿಬಿರ ಉದ್ಘಾಟಿಸಿದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮತ್ತು ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಗೋಪಾಲ ಪೂಜಾರಿ ಶುಭಾಶಂಸನೆಗೈದರು. ಅಂಬೇಡ್ಕರ ಯುವಕ ಮಂಡಲ ಅಧ್ಯಕ್ಷ ನಾಗೇಶ, ಯೋಗ ತರಬೇತುದಾರೆ ರೂಪಾ ಬಾಬು ಪೈ, ಪ್ರಧಾನ ಅರ್ಚಕ ಜಿ.ರಾಘವೇಂದ್ರ ಆಚಾರ್ಯ, ಖಜಾಂಚಿ ನಾರಾಯಣ ಪೂಜಾರಿ, ಮಹಿಳಾ ಸಮಿತಿ ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ ವಂದಿಸಿದರು.