ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಕರಾವಳಿ, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ.
ಕೊಡಗಿನ ಗೋಣಿಕೊಪ್ಪ, ಚಿಕ್ಕಮಗಳೂರಿನ ಮೂಡಗೆರೆ, ದಕ್ಷಿಣ ಕನ್ನಡದ ಮಂಗಳೂರು, ಮಂಡ್ಯ ಸೇರಿ ರಾಜ್ಯ ಕೆಲ ಭಾಗಗಳಲ್ಲಿ ಮಂಗಳವಾರ ವರ್ಷಧಾರೆಯಾಗಿದೆ. ಬೆಂಗಳೂರು ಸೇರಿ ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸೆ.11ರಿಂದ ಸೆ.12ರ ವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಕೊಟ್ಟಿದೆ.
ಕರಾವಳಿಯ ಕೆಲ ವ್ಯಾಪ್ತಿಯಲ್ಲಿ ಪ್ರತಿ ಗಂಟೆಗೆ 30-40 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಕೊಡಗಿನಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್ ಇರಲಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಭಾಗದ ಜಿಲ್ಲೆಗಳಲ್ಲಿ ಮಳೆ ಇಳಿಮುಖವಾಗಿದೆ. ಆದರೂ, ಕೆಲ ಭಾಗಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವ ಇದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ.ಗರಿಷ್ಠ,ಕನಿಷ್ಠ ತಾಪಮಾನ ಕ್ರಮವಾಗಿ 30 ಡಿ.ಸೆ. ಮತ್ತು 21 ಡಿ.ಸೆ.ಇರಲಿದೆ.