ಜಿಲ್ಲೆ

ಬಹುಮುಖ ಪ್ರತಿಭೆಯ ಗುರು ಯಶವಂತ ರೈ : ಬೋಧನೆಯಲ್ಲಿ ಎತ್ತಿದ ಕೈ ಕಲೆಗೂ ಸೈ ಕಲಿತ ಸಂಸ್ಥೆಯಲ್ಲೇ 37 ವರ್ಷ ಸೇವೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ ಸೆ.30 ಸೇವಾ ನಿವೃತ್ತಿ ಹೊಂದಲಿದ್ದಾರೆ. ಬಹುಮುಖ ಪ್ರತಿಭೆಯ ಗುರುಗಳಾದ ಅವರು ಉತ್ತಮ ಕಲಾವಿದ, ನಾಟಕಕಾರ, ನಾಟಕ ನಿರ್ದೇಶಕ, ಕವಿ, ವಾಗ್ಮಿ, ಗೀತಾ ರಚನಾಕಾರ. ಪಾಠಕ್ಕೂ ಸೈ ಅಭಿಯನದಲ್ಲಿ ಎತ್ತಿದ ಕೈ ಎನಿಸಿಕೊಂಡವರು.

ಕಲಿತ ಶಾಲೆಯಲ್ಲೇ ನಿವೃತ್ತಿ

ಶ್ರೀ ಸುಬ್ರಹ್ಮಣ್ಯೇಶ್ವರ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 1988 ಆ.11ರಂದು ವಿಜ್ಞಾನ ಪದವೀಧರ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. 13 ವರ್ಷಗಳಿಂದ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾಸಂಸ್ಥೆಯಲ್ಲಿ 37 ವರ್ಷ ಸೇವೆ ಸಲ್ಲಿಸಿ ಇಂದು ನಿವೃತ್ತರಾಗಲಿದ್ದಾರೆ.ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರೌಢ ಮತ್ತು ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇದೇ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ವಿಶೇಷವಾಗಿದೆ.

ನಾಟಕಕಾರ-ನಿರ್ದೇಶಕ

ಯಕ್ಷಗಾನ ಕಲಾವಿದರಾದ ಅವರು ತಾಳಮದ್ದಳೆ ಅರ್ಥದಾರಿ. 9 ತುಳು ನಾಟಕ, 5 ಕನ್ನಡ ನಾಟಕ ಎರಡು ಕವನ ಸಂಕಲನ, ಅನೇಕ ರೂಪಕಗಳನ್ನು ರಚಿಸಿದ್ದಾರೆ. 400ಕ್ಕೂ ಅಧಿಕ ವಿದ್ಯಾಸಂಸ್ಥೆಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಅಸಂಖ್ಯಾತ ನಾಟಕ ನಿರ್ದೇಶಿಸಿದ್ದಾರೆ. 200ಕ್ಕೂ ಅಧಿಕ ಧಾರ್ಮಿಕ ಉಪನ್ಯಾಸ ನೀಡಿದ್ದಾರೆ. 75ಕ್ಕೂ ಹೆಚ್ಚು ನಾಟಕ, ಯಕ್ಷಗಾನ, ರೂಪಕ, ಜಾನಪದ ನೃತ್ಯಗಳಿಗೆ ನಿರ್ದೇಶಕರಾಗಿ ಪದ್ಯ ರಚಿಸಿ ಹಾಡಿದ್ದಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ

ಯಶವಂತ ರೈ ಅವರ ಬಹುಮುಖ ಪ್ರತಿಭೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ರಾಜ್ಯ ವಿಜ್ಞಾನ ನಾಟಕ ಪ್ರಶಸ್ತಿ, ಜಿಲ್ಲಾ ವಿಜ್ಞಾನ ಸಂಘಟನಾ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಶಿಕ್ಷಕ ಶ್ರೀ ಪ್ರಶಸ್ತಿ, ನ್ಯಾಷನಲ್ ಬಿಲ್ಡರ್ ಪ್ರಶಸ್ತಿ, ಪ್ರಣವ ಶಿಕ್ಷಕರ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದವರು. 37ವರ್ಷದ ಸೇವೆಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ.

ಗುರುಗಳು ನಮ್ಮಂಥ ಅಸಂಖ್ಯಾತ ಶಿಷ್ಯರಿಗೆ ಬದುಕಿನ ಪಾಠ ಹೇಳಿ ಕೊಟ್ಟವರು.ಅವರ ಬಹುಮುಖ ಪ್ರತಿಭೆಯನ್ನು ಶಿಷ್ಯರಿಗೆ ಧಾರೆ ಎರೆದ ಕಾರಣ ಅವರ ಅಪಾರ ಶಿಷ್ಯರು ಪ್ರತಿಭಾ ಸಂಪನ್ನರಾಗಿ ಪ್ರಗತಿ ಸಾಧಿಸಿದ್ದಾರೆ. ಅಸಂಖ್ಯಾತ ಶಿಷ್ಯರು ಈಗಲೂ ಅವರ ಮೇಲೆ ಅತೀವ ಪ್ರೀತಿ ಗೌರವ ಹೊಂದಿದ್ದಾರೆ ಅನ್ನುವುದಕ್ಕೆ ಅಸಂಖ್ಯಾತ ಉದಾಹರಣೆ ಇದೆ. ಅವರ ಶಿಷ್ಯ ವೃಂದವೆಲ್ಲ ಸೇರಿ ಅ.2ರಂದು ಅವರಿಗೆ ಗುರುವಂದನೆ ಸಲ್ಲಿಸಲು ನಿರ್ಧರಿಸಿದ್ದೇವೆ. ರತ್ನಾಕರ ಸುಬ್ರಹ್ಮಣ್ಯ, ಯಶವಂತ ರೈಗಳ ಶಿಷ್ಯ