ರಾಮ್ಕಿ ಶ್ರೀನಿವಾಸನ್ ಬೆಂಗಳೂರು ಮೂಲದ ಟೆಕ್ಕಿ. ಕಾಲೇಜು ಮುಗಿಸಿ ಗೆಳೆಯರೊಂದಿಗೆ ಸ್ಟಾರ್ಟಪ್ ಆರಂಭಿಸಿ ಯಶಸ್ವಿ ಉದ್ಯಮಿಯೂ ಆದ ಅವರಿಗೆ ಹವ್ಯಾಸವಾದ ಪಕ್ಷಿವೀಕ್ಷಣೆಯ ಸೆಳೆತ ಜಾಸ್ತಿಯಾಗುತ್ತಿದ್ದಂತೆಯೇ ಉದ್ಯಮವನ್ನು ತ್ಯಜಿಸಿ ಸಂಪೂರ್ಣವಾಗಿ ಹವ್ಯಾಸವನ್ನೇ ಅಪ್ಪಿಕೊಂಡರು. ಪಕ್ಷಿಗಳ ಮೇಲೆ ಮಾನವನ ದಬ್ಬಾಳಿಕೆಯ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತ ಹೋದಂತೆ ತಾನೂ ಅವುಗಳ ನೆರವಿಗೆ ಬರಬೇಕೆಂಬ ತುಡಿತ ಜಾಸ್ತಿಯಾಯಿತು. ಇದರ ಪರಿಣಾಮವೇ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ‘ಕನ್ಸರ್ವೆಷನ್ ಇಂಡಿಯಾ’ ಎಂಬ ಸಂಸ್ಥೆ ಸ್ಥಾಪಿಸಿದರು. ಪಕ್ಷಿಗಳ ಗಣತಿ, ಅವುಗಳ ಕುರಿತು ಜಾಗೃತಿ ಮೂಡಿಸಲೆಂದೇ ಸ್ಥಾಪಿತವಾದ ಸಂಸ್ಥೆಯದು. 2011 ರಲ್ಲಿ ನಾಗಾಲ್ಯಾಂಡಿನಲ್ಲಿ ಅವರ ತಂಡ ವನ್ಯಜೀವಿ ಗಣತಿಯೊಂದರಲ್ಲಿ ಪಾಲ್ಗೊಂಡಿದ್ದಾಗ, ಸ್ಥಳೀಯರು ಚಳಿಗಾಲಕ್ಕೆ ರಾಜ್ಯಕ್ಕೆ ವಲಸೆ ಬರುತ್ತಿದ್ದ ಕೆಂಪು ಕಾಲಿನ ಚಾಣ ಪಕ್ಷಿಯ ಹತ್ಯೆ ನಡೆಸುತ್ತಿದ್ದುದು ಅವರ ಗಮನಕ್ಕೆ ಬಂತು. ಇದರ ಮುಂದಿನ ವರ್ಷ ಮತ್ತೆ ಆ ರಾಜ್ಯದ ದೊಯಾಂಗ್ ಜಲಾಶಯಕ್ಕೆ ಭೇಟಿ ನೀಡಿದ ಆ ತಂಡ ಆ ಪಕ್ಷಿಯ ಹತ್ಯಾಕಾಂಡ ಮುಂದುವರಿದುದನ್ನು ನೋಡಿ ಅದರ ವಿರುದ್ಧ ದೊಡ್ಡ ಅಭಿಯಾನವನ್ನೇ ಆರಂಭಿಸಿದರು. ರಾಮ್ಕಿ ತಂಡವು ಗಮನಿಸಿದಂತೆ ಪ್ರತಿವರ್ಷ ನಾಗಾಲ್ಯಾಂಡಿನಲ್ಲಿ 1.40 ಲಕ್ಷ ಚಾಣಗಳ ಹತ್ಯೆಯಾಗುತ್ತಿತ್ತು. ಇದನ್ನು ಪುರಾವೆ ಸಮೇತ ಸಾಬೀತು ಪಡಿಸಿ ಸ್ಥಳೀಯ ಆಡಳಿತದ ಮೇಲೆ ಒತ್ತಡ ತಂದ ಪರಿಣಾಮ 2012 ರಲ್ಲಿ ನಾಗಾಲ್ಯಾಂಡಿನಲ್ಲಿ ಕೆಂಪು ಕಾಲಿನ ಚಾಣಗಳ ಹತ್ಯೆಯನ್ನು ನಿಷೇಧಿಸಲಾಯಿತು. ಅಷ್ಟಕ್ಕೇ ಸುಮ್ಮನಾಗದ ತಂಡ ಈ ಕೃತ್ಯದ ಪ್ರಮುಖ ಪಾಲುದಾರರಾಗಿದ್ದ ಅಲ್ಲಿನ ಮೀನುಗಾರ ಕುಟುಂಬಗಳಿಗೆ ಹಕ್ಕಿಗಳ ಹತ್ಯೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಹೇಳಿತು. ಅವರ ಮಕ್ಕಳು ಓದುತ್ತಿದ್ದ ಶಾಲೆಗಳಲ್ಲಿ ಈ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಾಯಿತು. ಇವೆಲ್ಲದರ ಪರಿಣಾಮ ಹತ್ಯೆ ಮಾಡುತ್ತಿದ್ದ ಕೈಗಳೇ ಆ ಪಕ್ಷಿಗಳ ರಕ್ಷಣೆಗೆ ಮುಂದಾದವು. ಈಗ ಅಲ್ಲಿ ಚಾಣಗಳ ಹತ್ಯೆ ಸಂಪೂರ್ಣವೆನ್ನುವಷ್ಟರ ಮಟ್ಟಿಗೆ ನಿಂತಿದೆ. ಈ ಯಶಸ್ಸಿನ ರೂವಾರಿ ರಾಮ್ಕಿ ಕಳೆದ ಡಿಸೆಂಬರ್ನಲ್ಲಿ ಇಹಲೋಕ ತ್ಯಜಿಸಿದರೂ ಅವರು ಹೇಳಿಕೊಟ್ಟ ಪಾಠವನ್ನು ನಾಗಾಲ್ಯಾಂಡಿನ ಜನತೆ ನೆನಪಿನಲ್ಲಿಟ್ಟುಕೊಂಡಿದೆ.
ವನ್ಯಜೀವಿ ಸಂರಕ್ಷಣೆಯ ದಾರಿಯಲ್ಲಿ ಸ್ಥಳಿಯರನ್ನು ಒಗ್ಗೂಡಿಸಿ ಹೋದರಷ್ಟೇ ಯಶಸ್ಸು ಸಾಧ್ಯವೆನ್ನಲು ಈ ಉದಾಹರಣೆಗಳೇ ಸಾಕು. ಅದಿಲ್ಲವಾದಲ್ಲಿ ಅದು ಅಪ್ಪಟ ಸರ್ಕಾರಿ ಕಾರ್ಯಕ್ರಮವಾಗಿ ಆ ದಿನ ಸೆಲ್ಪಿ ತೆಗೆದುಕೊಳ್ಳುವವರ ಸಂಭ್ರಮಕ್ಕೆ ಸೀಮಿತವಾಗಬಹುದು.