ಜಿಲ್ಲೆ

ವಿಶ್ವ ಅನಿಮೇಷನ್ ದಿನಾಚರಣೆ :ಶಾರದಾ ಪದವಿ ಕಾಲೇಜಿನಲ್ಲಿ ಆಯೋಜನೆ

ಸೌಮ್ಯ ಆರ್

ಉಳ್ಳಾಲ: ತಲಪಾಡಿ ದೇವಿನಗರ ಶಾರದಾ ಪದವಿ ಕಾಲೇಜಿನಲ್ಲಿ ವಿಶ್ವ ಅನಿಮೇಷನ್ ದಿನ ಮಂಗಳವಾರ ಆಚರಿಸಲಾಯಿತು.

ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಉದ್ಘಾಟಿಸಿ, ಮಂಗಳೂರು ವಿಶ್ವವಿದ್ಯಾಲಯದಡಿ ಅನಿಮೇಷನ್‌ನಲ್ಲಿ ಪದವಿ ಕಾರ್ಯಕ್ರಮ ಪ್ರಾರಂಭಿಸುವಲ್ಲಿ ಶಾರದಾ ಪದವಿ ಕಾಲೇಜಿನ ಸಹಭಾಗಿತ್ವದ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ ಜೆ.ಪಣಿಕ್ಕರ್ ಮಾತನಾಡಿದರು. ಸಿಜಿಐ, ಮೋಷನ್ ಗ್ರಾಫಿಕ್ಸ್, 2ಡಿ ಅನಿಮೇಷನ್ ಬಳಸಿಕೊಂಡು ಶೈಕ್ಷಣಿಕ ಅವಧಿ ಮತ್ತು ಅನಿಮೇಷನ್ ಇತಿಹಾಸ, ಅನಿಮೇಷನ್ ಬಳಸಿ ಚಲನಚಿತ್ರ ನಿರ್ಮಾಣ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನದ ವಿಭಿನ್ನ ಪರಿಣಾಮಗಳ ಮೇಲೆ ಕೇಂದ್ರೀಕರಿಸಿದ ವಿಷಯಗಳ ಬಗ್ಗೆ ಶಾರದಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೇಯಸ್ ನೇತೃತ್ವದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತಂಡ, ಪಿಯುಸಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತು.

ಪಿಯುಸಿ ಮತ್ತು ಶಾಲೆಯ 800 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾರದಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅನಿಮೇಷನ್ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನ ಬಳಸಿಕೊಂಡು ಶಾರದಾ ಕಾಲೇಜಿಗೆ ಗಾಡ್ಜಿಲ್ಲಾ ಬರುವುದನ್ನು ಕಲ್ಪಿಸಿಕೊಳ್ಳುವ ಕಿರುಚಿತ್ರ ರಚಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಎಂ.ಕೆ. ಉಪಸ್ಥಿತರಿದ್ದರು.