ಮಾನ್ವಿ: ಜನಪ್ರತಿನಿಧಿಗಳು, ಜಲಸಂಪನ್ಮೂಲ ಅಧಿಕಾರಿಗಳು ತುಂಗಭದ್ರಾ ಜಲಾಶಯದ ಕಾಲುವೆಯ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ ಬೆಟ್ಟದೂರು ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಈಗಾಗಲೇ ಡ್ಯಾಂನಲ್ಲಿ 80 ಟಿಎಂಸಿ ನೀರು ಸಂಗ್ರಹವಾಗಿದೆ. ಮೇಲ್ಭಾಗದಲ್ಲಿ ಭತ್ತ ನಾಟಿ ಕಾರ್ಯ ನಡೆದಿದೆ. ಕೆಲ ರೈತರು ಭತ್ತ ನಾಟಿ ಮಾಡಿದ್ದಾರೆ. ಆದರೆ ಶಿವಪುರದಲ್ಲಿ ಶಿಥಿಲಗೊಂಡಿರುವ ಕಾಮಗಾರಿ ಮೇ ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ಇನ್ನೂ ಮುಗಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ವಿಳಂಬದಿಂದ ಕೆಳಭಾಗದ ರೈತರಿಗೆ ನೀರಿನ ತೊಂದರೆಯಾಗಲಿದೆ. ಈಗಾಗಲೇ ಭತ್ತ ನಾಟಿ ಮಾಡಿದ ರೈತರಿಗೆ ಇಳುವರಿ ಕಡಿಮೆಯಾಗಲಿದೆ. ಆದಷ್ಟು ಬೇಗ ಕಾಲುವೆಗೆ ನೀರು ಹರಿಸಬೇಕು ಎಂದು ತಿಳಿಸಿದರು. ಕಾಲುವೆಯ ಮೇಲ್ಭಾಗದಲ್ಲಿ ಅಕ್ರಮವಾಗಿ ಕಾಲುವೆ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಕೆಳ ಭಾಗಕ್ಕೆ ನೀರು ಸಮರ್ಪಕವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಲ್ಲಿಗೆಮಡುವು, ತಾಲೂಕು ಅಧ್ಯಕ್ಷ ಸಿದ್ದಯ್ಯಸ್ವಾಮಿ, ರೈತ ಮುಖಂಡರಾದ ಲಿಂಗಾರಡ್ಡಿ ಪಾಟೀಲ, ಶಂಕರಗೌಡ, ಅಮರೇಶ ಅಲ್ವಾಳ್ ಇದ್ದರು.