ಜಿಲ್ಲೆ

ಲಿಫ್ಟ್‌ ಚೈನ್‌ ತುಂಡಾಗಿ ಕಾರ್ಮಿಕ ಸಾವು

Uttara Kannada - Subash Hegde

ಕುಮಟಾ: ಲಿಫ್ಟ್ ಅವಘಡದಲ್ಲಿ ಕಾರ್ಮಿಕ ಮೃತಪಟ್ಟ ಘಟನೆ ಪಟ್ಟಣದ ಸುಭಾಸ ರಸ್ತೆಯಲ್ಲಿರುವ ಜಗದಂಬಾ ಇಲೆಕ್ಟ್ರಿಕಲ್ಸ್‌ ಮಳಿಗೆಯಲ್ಲಿ ಬುಧವಾರ ನಡೆದಿದೆ. ಮೃತನನ್ನು ಜಗದಂಬಾ ಇಲೆಕ್ಟ್ರಿಕಲ್‌ ಅಂಗಡಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕ ರಾಜಸ್ಥಾನದ ಜೋತಪುರ ಜಿಲ್ಲೆಯ ಓಸಿಯಾ ತಾಲೂಕಿನ ಇಂದೋ ಗ್ರಾಮದ ನಿವಾಸಿ ಗೋಪಾಲಸಿಂಗ್ ಭವರ್‌ಸಿಂಗ್(24) ಎಂದು ಗುರುತಿಸಲಾಗಿದೆ.
ಅಂಗಡಿಯಲ್ಲಿ ಗ್ರಾಹಕರಿಗೆ ಬೇಕಾದ ಸಾಮಗ್ರಿಗಳನ್ನು ತರಲು ಮೇಲಂತಸ್ತಿಗೆ ತೆರಳಿದ್ದ ಕಾರ್ಮಿಕ ಗೋಪಾಲಸಿಂಗ್ ಲಿಫ್ಟ್ನಲ್ಲಿ ಸಾಮಗ್ರಿ ಇರಿಸಿಕೊಂಡು ಕೆಳಗಿಳಿಯುವ ಹಂತದಲ್ಲಿ ಲಿಫ್ಟನ ಚೈನ್ ತುಂಡಾಗಿದೆ. ಈ ವೇಳೆ ಗೋಪಾಲಸಿಂಗ್ ಎದೆಭಾಗ ಲಿಫ್ಟಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಅದೇ ಅಂಗಡಿಯ ಇನ್ನೋರ್ವ ಕಾರ್ಮಿಕ ಉದಯ ಮಹಾದೇವ ನಾಯ್ಕ ಪೊಲೀಸರಿಗೆ ದೂರಿದ್ದಾರೆ.
ಈ ಕುರಿತು ಜಗದಂಬಾ ಇಲೆಕ್ಟಿಕಲ್ಸ ಮಾಲೀಕರಾದ ನರೇಂದ್ರಸಿಂಗ್ ಮಾಂಗುಸಿಂಗ ರಾಠೋಡ(34) ಹಾಗೂ ಲಕ್ಷ್ಮಣ ಸಿಂಗ್‌ ಮಾಂಗುಸಿಂಗ್‌ ರಾಠೋಡ(29) ಅವರ ಮೇಲೆ ಅಸುರಕ್ಷಿತ ಮತ್ತು ಅಪೂರ್ಣ ಲಿಫ್ಟ್ನಲ್ಲಿ ಕೆಲಸಗಾರರಿಂದ ಸಾಮಗ್ರಿ ತರಿಸಿ, ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.