ಜಿಲ್ಲೆ

ಕಾರ್ಮಿಕ ಮೃತ್ಯು, ಮಾಲೀಕನ ಮೇಲೆ ಪ್ರಕರಣ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಪಡುವನ್ನೂರು ಗ್ರಾಮದ ಮೈಕುಲೆ ಎಂಬಲ್ಲಿನ ಕೆಂಪು ಕಲ್ಲಿನ ಕ್ವಾರಿಯಲ್ಲಿ ಕಟ್ಟಿಂಗ್ ಮಷಿನ್ ಮೂಲಕ ಕಲ್ಲು ಕಟ್ಟಿಂಗ್ ಮಾಡುತ್ತಿದ್ದ ವೇಳೆ ಕಲ್ಲು ಕಟ್ಟಿಂಗ್ ಮಷಿನ್‌ನ ಪುಲ್ಲಿ (ರಾಟೆ)ಯು ಬೋಲ್ಟ್‌ನಿಂದ ಬೇರ್ಪಟ್ಟು ಹೊಟ್ಟೆಯ ಪಕ್ಕೆಲುಬು ಭಾಗಕ್ಕೆ ಬಿದ್ದು ಅಸ್ಸಾಂ ಮೂಲದ ಕೂಲಿಕಾರ್ಮಿಕ ಯುವಕನೊಬ್ಬ ಮೃತಪಟ್ಟಿದ್ದಾರೆ. ಅಸ್ಸಾಂ ರಾಜ್ಯದ ಉದಲ್ ಗುರಿ ಜಿಲ್ಲೆಯ ಕೊಯಿರಭಾರಿ ಸಮೀಪದ ಜಬಾಂಗ್ ಪಥರ್ ನಿವಾಸಿ ಬುದ್ರಮ್ ಬೊರೊ ಎಂಬುವರ ಪುತ್ರ ಪ್ರದೀಪ್ ಬೊರೊ (27) ಮೃತಪಟ್ಟ ಕೂಲಿಕಾರ್ಮಿಕ. ಪ್ರಜನ್ ಎಸ್.ಶೆಟ್ಟಿ ಎಂಬುವರಿಗೆ ಸೇರಿದ ಕೆಂಪು ಕಲ್ಲಿನ ಕ್ವಾರಿಯಲ್ಲಿ ಅವಘಡ ಸಂಭವಿಸಿದ್ದು, ಕಟ್ಟಿಂಗ್ ಮಷಿನ್‌ನ ಬೋಲ್ಟ್ ಮತ್ತು ಮಷಿನ್ ಸುಸ್ಥಿತಿಯಲ್ಲಿ ಇರುವ ಕುರಿತು ಪರಿಶೀಲಿಸದೆ, ಸುರಕ್ಷತಾ ಪರಿಕರಗಳನ್ನು ನೀಡದೆ ಮಾಲೀಕ ನಿರ್ಲಕ್ಷ್ಯ ವಹಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಮೃತರ ಸಹೋದರ ತಪೋನ್ ಬೊರೊ ನೀಡಿದ ದೂರಿನನ್ವಯ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.