ಕನಕಗಿರಿ ತಾಲೂಕಿನ ಜೀರಾಳ ಗ್ರಾಪಂ ವ್ಯಾಪ್ತಿಯಲ್ಲಿನ ನಾಲೆ ಹೂಳೆತ್ತುವ ಸ್ಥಳದಲ್ಲಿ ತಾಪಂ ಎಡಿ ಶರಪೂನ್ನಿಸಾ ಬೇಗಂ ಮಾತನಾಡಿದರು. ಗ್ರಾಪಂ ಸದಸ್ಯರಾದ ಯಲ್ಲಪ್ಪ, ರಮೇಶ ಉಪ್ಪಾರ, ಪಿಡಿಒ ಚಂದುಸ್ವಾಮಿ, ತಾಲೂಕು ಐಇಸಿ ಸಂಯೋಜಕ ಕೆ.ಶಿವಕುಮಾರ್, ತಾಂತ್ರಿಕ ಸಹಾಯಕ ಮಹೇಶ ರೆಡ್ಡಿ ಇತರರಿದ್ದರು. 
ಜಿಲ್ಲೆ

ಕಾರ್ಯಕ್ಕೆ ತಕ್ಕಂತೆ ವರಮಾನ

ಕನಕಗಿರಿ: ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ಗ್ರಾಪಂ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಪಾರದರ್ಶಕವಾಗಿ ಎನ್‌ಎಂಎಂಎಸ್ ಮೂಲಕ ದಾಖಲಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ ಹೇಳಿದರು.

ತಾಲೂಕಿನ ಜೀರಾಳ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಸ್ತ್ರೀ ಚೇತನ ಅಭಿಯಾನ ಹಾಗೂ ರೋಜಗಾರ ದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ನಾಲೆ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಗೆ ನೆರವಾಗಲಿದೆ. ಸರಿಯಾಗಿ ಹೂಳೆತ್ತಿದರೆ ಮಳೆಗಾಲದಲ್ಲಿ ನೀರು ಇಂಗಿಸಲು ಹಾಗೂ ಸಂಗ್ರಹಿಸಲು ಸಹಕಾರಿ ಆಗಲಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆಲಸದಲ್ಲಿ ಶೇ.30 ವಿನಾಯಿತಿ ಇದ್ದು, ಕೂಲಿಕಾರರು ಸದ್ಬಳಕೆ ಮಾಡಿಕೊಳ್ಳಿ. ಗ್ರಾಪಂ ಸಿಬ್ಬಂದಿ ಕೂಲಿಕಾರರ ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಕಾರ್ಮಿಕರು ಸಹ ಅಳತೆ ಪ್ರಕಾರ ಕೆಲಸ ಮಾಡಬೇಕು. ಕೆಲಸಕ್ಕೆ ತಕ್ಕಂತೆ ಕೂಲಿ ದೊರೆಯಲಿದೆ ಎಂದರು.

ಇದಕ್ಕೂ ಮುನ್ನ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಚಿರ್ಚನಗುಡ್ಡ ತಾಂಡಾದಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೂ ಭೇಟಿನೀಡಿ ಪರಿಶೀಲಿಸಿದರು.

ಗ್ರಾಪಂ ಸದಸ್ಯರಾದ ಯಲ್ಲಪ್ಪ, ರಮೇಶ ಉಪ್ಪಾರ, ಗ್ರಾಪಂ ಪಿಡಿಒ ಚಂದುಸ್ವಾಮಿ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ., ತಾಂತ್ರಿಕ ಸಹಾಯಕ ಮಹೇಶ ರೆಡ್ಡಿ, ಬಿಎಫ್‌ಟಿ ಅಮರೇಶ್, ಡಿಇಒ ಕನಕರಾಯ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಇತರರಿದ್ದರು.