ಜಿಲ್ಲೆ

ಮಹಿಳೆಯರ ಮಡಿಲಿಗೆ ನಾಣ್ಯ, ಮಕ್ಕಳ ಅಭಿವೃದ್ಧಿ ನಗಣ್ಯ!

| ಮೃತ್ಯುಂಜಯ ಕಪಗಲ್ ಬೆಂಗಳೂರು

ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಬಲತೆ ಸಾಧಿಸಿದರೆ ಕುಟುಂಬಕ್ಕೂ ಹಿತ, ಅಭಿವೃದ್ಧಿಗೆ ಅನುಕೂಲ ಎಂಬುದು ರಾಜ್ಯ ಸರ್ಕಾರದ ನಿಲುವು. ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೋಟ್ಯಂತರ ಹಣ ನೀಡಿದ್ದರೂ ಹೇಳಿಕೊಳ್ಳುವಂಥ ಅಭಿವೃದ್ಧಿ ಸಾಧ್ಯವಾಗಿಲ್ಲ.

ಸಿಎಂ ಸಿದ್ದರಾಮಯ್ಯ ಜುಲೈನಲ್ಲಿ ಮಂಡಿಸಿದ ಪರಿಷ್ಕೃತ ಬಜೆಟ್​ನಲ್ಲಿ 24,165.71 ಕೋಟಿ ರೂ. (ಶೇ.7) ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಾಯ್ದಿರಿಸಿದ್ದಾರೆ. ಇಲಾಖೆಯಲ್ಲಿ ‘ಗೃಹಲಕ್ಷ್ಮಿ’ಯದೇ ದರ್ಬಾರ್ ಹೆಚ್ಚಾಗಿದ್ದು, ಇತರ ಯೋಜನೆಗಳು, ಕಾರ್ಯಚಟುವಟಿಕೆಗಳು ಹೇಳಿಕೊಳ್ಳುವಷ್ಟು ಪ್ರಗತಿ ಸಾಧಿಸಿಲ್ಲ. ಅಕ್ಟೋಬರ್ ಅಂತ್ಯದವರೆಗಿನ ಆರ್ಥಿಕ ಪ್ರಗತಿ ಗಮನಿಸಿದರೆ, ಹಂಚಿಕೆ ಮತ್ತು ಬಿಡುಗಡೆ ಮಾಡಿದ ಅನುದಾನದಲ್ಲಿ ಮನೆ ‘ಯಜಮಾನಿ’ಗೆ ಹಣ ಹಂಚಲು ಸಿಂಹಪಾಲು ವೆಚ್ಚವಾಗಿದೆ. ಇಲಾಖೆಯ ಒಟ್ಟು ಅನುದಾನದಲ್ಲಿ 17,500 ಕೋಟಿ ರೂ. ಯೋಜನೆಗೆ ಹಂಚಿಕೆ ಮಾಡಲಾಗಿದೆ. ಈ ಮೂಲಕ ಕುಟುಂಬದ ಮುಖ್ಯಸ್ಥೆಗೆ ಮಾಸಿಕ 2,000 ರೂ. ಭತ್ಯೆ ಪಾವತಿಸುವುದಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದು ಕಂಡುಬಂದಿದೆ. ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಅಕ್ಟೋಬರ್​ವರೆಗೆ ಗೃಹಲಕ್ಷ್ಮಿಗೆ 5,700.91 ಕೋಟಿ ರೂ. ಬಿಡುಗಡೆ ಮಾಡಿದ್ದು, 3,883 ಕೋಟಿ ರೂ. ವೆಚ್ಚವಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ 1,478 ಕೋಟಿ ರೂ. ಪ್ರತ್ಯೇಕವಾಗಿ ಒದಗಿಸಲಾಗಿದೆ.

ಕೆಲ ಗೃಹಗಳಿಗೆ ಲಕ್ಷ್ಮಿ ಪ್ರವೇಶಿಸಿಲ್ಲ: ಆಗಸ್ಟ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತಂದಾಗ 1.28 ಕೋಟಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ನವೆಂಬರ್ ಎರಡನೇ ವಾರದವರೆಗೆ 1.17 ಕೋಟಿ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 1.10 ಕೋಟಿ ಮಹಿಳೆಯರು ಯೋಜನೆ ಲಾಭ ಪಡೆದಿದ್ದಾರೆಂದು ಅಂಕಿ-ಅಂಶ ಹೇಳುತ್ತಿದ್ದರೂ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿಲ್ಲ ಎಂದು ಅನೇಕ ಮಹಿಳೆಯರು ದೂರುತ್ತಿದ್ದಾರೆ. ಅರ್ಹ ಫಲಾನುಭವಿ ಗಳಲ್ಲಿ 2ಲಕ್ಷ ಫಲಾನುಭವಿಗಳು ತಾಂತ್ರಿಕ ಸಿಕ್ಕುಗಳಲ್ಲಿ ಸಿಲುಕಿ, ಮಾಸಿಕ ಭತ್ಯೆಯಿಂದ ಸದ್ಯಕ್ಕೆ ವಂಚಿತರಾಗಿದ್ದು, ನೋಂದಾಯಿತರಲ್ಲಿ 5ಲಕ್ಷ ಫಲಾನುಭವಿಗಳ ಪರಿಸ್ಥಿತಿ ಏನೆಂಬುದು ಹೊರಬಿದ್ದಿಲ್ಲ. ಹೀಗಾಗಿ ಉಳಿದ ಅರ್ಹ ಮಹಿಳೆಯರ ಮನೆಗೆ ‘ಗೃಹಲಕ್ಷ್ಮಿ’ ಪ್ರವೇಶಿಸಿಲ್ಲ.

ಅದಾಲತ್​ಗೆ ಸಿಎಂ ಸೂಚನೆ: ಫಲಾನುಭವಿಗಳ ದೂರು, ಪ್ರತಿಪಕ್ಷಗಳ ಟೀಕೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ಖುದ್ದಾಗಿ ‘ಗೃಹಲಕ್ಷ್ಮಿ’ ಯೋಜನೆ ಪ್ರಗತಿ ಪರಿಶೀಲಿಸಿದ್ದಾರೆ. ಬ್ಯಾಂಕ್ ಖಾತೆ ಮಾಹಿತಿ ಗೊಂದಲ, ಆಧಾರ್ ಜೋಡಣೆ ಇನ್ನಿತರ ತಾಂತ್ರಿಕ ಅಡಚಣೆ, ಬಿಟ್ಟು ಹೋದ ಎಲ್ಲ ಅರ್ಹ ಫಲಾನುಭವಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಸೇರಿಸಬೇಕು. ಇದಕ್ಕಾಗಿ ಅದಾಲತ್ ನಡೆಸುವಂತೆಯೂ ಸೂಚಿಸಿದ್ದಾರೆ.

ಖಂಡಿತವಾಗಲೂ ‘ಗೃಹಲಕ್ಷ್ಮಿ’ ಯೋಜನೆ ಮುಖ್ಯವೇ. ಅದರ ಜತೆಗೆ ಇಲಾಖೆಯ ಇತರ ಕೆಲಸಗಳು ಕುಂಠಿತವಾಗುತ್ತಿವೆ. ಅಂಗನವಾಡಿ ಕೇಂದ್ರಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಈ ಕಡೆಗೂ ರಾಜ್ಯ ಸರ್ಕಾರ ಒಂದಿಷ್ಟು ಗಮನಹರಿಸಬೇಕಾಗಿದೆ.

| ಎಸ್.ವರಲಕ್ಷ್ಮೀ ರಾಜ್ಯಾಧ್ಯಕ್ಷೆ, ಸಿಐಟಿಯು

ಹಂಚಿಕೆಯಾಗಿ ಬಿಡುಗಡೆಯಾಗಿಲ್ಲ

ರಾಜ್ಯದಲ್ಲಿ ನೂರಾರು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಬಹಳಷ್ಟು ಅಪೂರ್ಣವಾಗಿವೆ. ಆದರೂ ನಗರ ಪ್ರದೇಶದ ಅಂಗನವಾಡಿ ಕಟ್ಟಡಗಳಿಗೆ 35 ಕೋಟಿ ರೂ., ಗ್ರಾಮೀಣ ಪ್ರದೇಶಕ್ಕೆ 80 ಕೋಟಿ ರೂ. ಹಂಚಿಕೆಯಾಗಿದ್ದು, ಈವರೆಗೂ ಬಿಡುಗಡೆಯಾದ ಮೊತ್ತ ಶೂನ್ಯ. ಅದೇ ರೀತಿ ಮಾತೃ ವಂದನಾ ಯೋಜನೆಗೆ 107.32 ಕೋಟಿ ರೂ ಒದಗಿಸಿದ್ದರೂ ಯಾವುದೇ ಮೊತ್ತ ಬಿಡುಗಡೆಯಾಗಿಲ್ಲ ಎಂದು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.

ಇತರ ಚಟುವಟಿಕೆಗೆ ಬ್ರೇಕ್

ಕರ್ನಾಟಕ ಪ್ರಗತಿ ಪರಿಶೀಲನಾ ಅಂಕಿ- ಅಂಶಗಳ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಯೋಜನೆಗಳಿಗೆ ಅಕ್ಟೋಬರ್ ಅಂತ್ಯದವರೆಗೆ 8,709.22 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆ ಒಳಗೊಂಡು ಒಟ್ಟು 6,383.94 ಕೋಟಿ ರೂ. ಖರ್ಚಾಗಿದೆ. ಸಮಗ್ರ ಮಕ್ಕಳ ವಿಕಾಸ ಯೋಜನೆಗೆ 378.11 ಕೋಟಿ ರೂ. ಹಂಚಿಕೆ, 47.06 ಕೋಟಿ ರೂ. ಬಿಡುಗಡೆ. ಸಮಗ್ರ ಅಭಿವೃದ್ಧಿ ಸೇವೆಯಡಿ 1705.75 ಕೋಟಿ ರೂ. ಹಂಚಿಕೆ, 1133.53 ಕೋಟಿ ರೂ. ಬಿಡುಗಡೆಯಾಗಿದೆ. ಕ್ಷೀರಭಾಗ್ಯ, ಸೃಷ್ಟಿ, ಮಾತೃಪೂರ್ಣ ಕಾರ್ಯಕ್ರಮಗಳಿಗೆ 833 ಕೋಟಿ ರೂ. ಹಂಚಿಕೆಯಾಗಿದ್ದು, 553.85 ಕೋಟಿ ರೂ. ಬಿಡುಗಡೆಯಾಗಿದೆ. ಕೇಂದ್ರ ಪುರಸ್ಕೃತ ವಾತ್ಸಲ್ಯ ಅಭಿಯಾನದಡಿ ರಾಜ್ಯದ ಪಾಲು 39.79 ಕೋಟಿ ರೂ. ಹಂಚಿಕೆ, 10.51 ಕೋಟಿ ರೂ. ಬಿಡುಗಡೆ ಯಾಗಿದೆ. ಭಾಗ್ಯಲಕ್ಷ್ಮಿ ಯೋಜನೆೆಗೆ 180 ಕೋಟಿ ರೂ. ಹಂಚಿಕೆ, 112.50 ಕೋಟಿ ರೂ. ಬಿಡುಗಡೆಯಾಗಿದೆ.