More

    ಉದ್ಯಾನ ನಗರಿಯಲ್ಲಿ ಕಂಬಳ ಚಿತ್ತಾರದ ಮೋಡಿ

    ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜನೆಗೊಂಡಿರುವ ಕರಾವಳಿ ಭಾಗದ ಕಂಬಳ ಖದರ್‌ಗೆ ಐದು ಲಕ್ಷಕ್ಕೂ ಹೆಚ್ಚು ಮಂದಿ ಫಿದಾ ಆಗಿದ್ದು, ಈ ಜಾನಪದ ಕ್ರೀಡೋತ್ಸವ ಹೊಸ ದಾಖಲೆಯೊಂದಿಗೆ ಇತಿಹಾಸದ ಪುಟ ಸೇರಿತು.

    ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ತುಳುನಾಡಿನ ಅಸ್ಮಿತೆಗೆ ಸಾಕ್ಷಿಯಾಯಿತು. ಕರಾವಳಿ ಆಚೆಗೂ ತುಳು ಸಂಸ್ಕೃತಿ ಪಸರಿಸುವ ಹೆಬ್ಬಯಕೆ ಈಡೇರಿದೆ. ಎರಡೂ ದಿನವೂ ಲಕ್ಷಾಂತರ ಮಂದಿ ಕಂಬಳ ಕಣ್ತುಂಬಿಕೊಳ್ಳುವ ಜತೆಗೆ ಕಂಬಳ ಸಾಂಸ್ಕೃತಿಕ ಹಬ್ಬವಾಗಿ ರಾಜಧಾನಿಯಲ್ಲಿ ಸದ್ದು ಮಾಡಿತು.

    ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಕೋಣಗಳು ಓಡುವ ಕರೆ ಸುತ್ತ ಜನಸಾಗರವೇ ಸೇರಿತ್ತು. ವಾರಾಂತ್ಯದ ಕಾರಣ ಕುಟುಂಬ ಸಮೇತರಾಗಿ ಆಗಮಿಸಿದ್ದ ಜನರು ಕಂಬಳವನ್ನು ಹತ್ತಿರದಿಂದ ವೀಕ್ಷಿಸಲು ಪೈಪೋಟಿ ನಡೆಸಿದರು. ಕರಾವಳಿ ಜನರ ಜತೆಗೆ ಮಲೆನಾಡು, ಬಯಲುಸೀಮೆ ಜನ ಕೂಡ ಕಂಬಳದ ಗತ್ತು ಗೈರತ್ತಿಗೆ ತಲೆದೂಗಿದರು. ಕರಾವಳಿ ಭಾಗದಲ್ಲೂ ಇಷ್ಟ ಜನಸ್ತೋಮ ಕಾಣದ ಈ ಕ್ರೀಡೆಗೆ ಬೆಂಗಳೂರಿನಲ್ಲಿ ಜನಪ್ರವಾಹವೇ ಹರಿದುಬಂದಿದ್ದು ನೋಡಿ ಕೋಣಗಳ ಯಜಮಾನರು ಮತ್ತೆ ರಾಜಧಾನಿಯಲ್ಲಿ ಕಂಬಳ ಉತ್ಸವ ಆಯೋಜಿಸಿದರೆ ಭಾಗವಹಿಸುವ ಉಮೇದು ವ್ಯಕ್ತಪಡಿಸಿದರು.

    ಚಪ್ಪಾಳೆ, ಕೇಕೆ, ಕೂಗು . . . :

    ಕಂಬಳದ ಮೊದಲ ದಿನ ಕರೆಯಲ್ಲಿ ಕೋಣಗಳ ಓಟ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಮುದ ನೀಡಿತ್ತು. ರಾತ್ರಿ ಕೂಡ ಝಗಮಗಿಸುವ ಬಣ್ಣದ ಚಿತ್ತಾರ ಸೃಷ್ಟಿಸಿ ಕಿನ್ನರಲೋಕವೇ ಸೃಷ್ಟಿಯಾಗಿತ್ತು. ಇದು ಎರಡನೇ ದಿನವೂ ಮರುಕಳಿಸಿದ್ದು, ಹೊನಲು ಬೆಳಕಿನಲ್ಲಿ ಕೋಣಗಳ ಓಟದ ದಿಬ್ಬಣ ಮಧ್ಯರಾತ್ರಿವರೆಗೂ ಸಾಗಿತ್ತು. ಈ ಅಪರೂಪದ ಉತ್ಸವಕ್ಕೆ ಉತ್ಸಾಹದಿಂದ ಬೆಳಗ್ಗೆಯೇ ಆಗಮಿಸಿದ್ದವರೂ ಸಂಜೆವರೆಗೂ ಸ್ಥಳ ಬಿಟ್ಟು ತೆರಳಲಿಲ್ಲ. ಪ್ರತಿ ಓಟ ನಡೆದಾಗಲೂ ಸಮೂಹಸನ್ನಿಗೆ ಒಳಗಾದವಂತೆ ಜನರು ಕೇಕೆ, ಶಿಳ್ಳೆ, ಕೂಗು ಹಾಕುವಿಕೆಯಲ್ಲಿ ನಿರತರಾಗಿದ್ದರು. ಸಂಘಟಕರು ಬೇರೆಯವರಿಗೂ ಕಂಬಳ ವೀಕ್ಷಿಸಲು ಅನುವು ಮಾಡಿಕೊಡುವಂತೆ ಪದೇ ಪದೆ ಧ್ವನಿವರ್ಧಕದ ಮೂಲಕ ವಿನಂತಿಸಿದರೂ, ಕರೆ ಸುತ್ತ ಜನಜಾತ್ರೆ ಕರಗಲಿಲ್ಲ. ಅಷ್ಟರಮಟ್ಟಿಗೆ ಕಂಬಳಕ್ಕೆ ಜನ ಆಯಸ್ಕಾಂತದಂತೆ ಸೆಳೆತಕ್ಕೆ ಒಳಗಾದರು.

    ಸಣ್ಣ ಮಕ್ಕಳನ್ನು ಪೋಷಕರು ತಮ್ಮಹೆಗಲ ಮೇಲೆ ಕೂರಿಸಿ ಕಂಬಳದ ಸವಿಯುಣಿಸಿದರು. ಸಾಮಾನ್ಯ ಜನರ ಜತೆ ಗಣ್ಯರು ಕೂಡ ಕಂಬಳವನ್ನು ವೀಕ್ಷಿಸಿದರು. ಸೆಲಿಬ್ರಿಟಿಗಳು ಕೂಡ ಗಂಟೆಗಟ್ಟಲೇ ಕೂತು ಕಂಬಳದ ಸೊಗಡನ್ನು ಆಸ್ವಾದಿಸಿದರು. ವಿದೇಶಿಯರು ಕರೆ ಬಳಿಯೇ ನಿಂತು ಕೋಣಗಳ ಮೈ ಸವರಿ ಪುಳಕಗೊಂಡು ಅವುಗಳ ೆಟೋ ಕ್ಲಿಕ್ಕಿಸಿ ಖುಷಿಪಟ್ಟರು.

    ಕಚಗುಳಿ ಇಟ್ಟ ಹಾಸ್ಯದ ಹೊನಲು:

    ಸಾಂಸ್ಕೃತಿಕ ವೇದಿಕೆಯಲ್ಲಿ ತುಳುನಾಡಿನ ವೈವಿಧ್ಯಮಯ ಕಾರ್ಯಕ್ರಮಗಳು ರಾರಾಜಿಸಿದವು. ಯಕ್ಷಗಾನಕ್ಕಿಂತ ಹುಲಿ ವೇಷಧಾರಿಗಳ ಕುಣಿತ, ಹಾಸ್ಯ ಪ್ರಹಸನ ಜನರನ್ನು ಹೆಚ್ಚು ರಂಜಿಸಿತು. ಕೆಲ ಪ್ರಹಸನಗಳು ತುಳು ಭಾಷೆಯಲ್ಲೇ ಪ್ರಸ್ತುತಪಡಿಸಿದ ಕಾರಣ ಸಭಾಂಗಣದಲ್ಲಿ ವೀಕ್ಷಕರ ಸಂತೋಷ ಮೇರೆ ಮೀರಿತ್ತು. ಮಧ್ಯೆ ಮಧ್ಯೆ ತುಳುನಾಡಿನ ಶ್ರೀಮಂತಿಕೆ ಸಾರುವ ದೈವರಾದಾನೆ, ಬೂತಾರಾಧನೆ ಬಗ್ಗೆ ವಿವರಣೆ ನೀಡಲಾಯಿತು. ಈ ವೇಳೆ ಜನ ಕಾಂತಾರ, ಕಾಂತಾರ ಎಂದು ಕೂಗು ಹಾಕಿದರು.

    ಪೊಳಲಿ ಟೈಗರ್ಸ್‌ ತಂಡವು ಪ್ರಸ್ತುತಪಡಿಸಿದ ಹುಲಿ ವೇಷಧಾರಿಗಳ ಕುಣಿತಕ್ಕೆ ಭಾರೀ ಕರಾತಾಡನ ಸಿಕ್ಕಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದ ಹೊರಗೆ ಜನ ನಿಂತಿದ್ದು ಕಂಡುಬಂತು. ಅಲ್ಲಲ್ಲಿ ಎಲ್‌ಇಡಿ ಸ್ಕ್ರೀ ಅಳವಡಿಸಿದ್ದು, ಅಲ್ಲೂ ಕೂಡ ಜನ ಜಮಾಯಿಸಿ ಉತ್ಸವದ ಕ್ಷಣಗಳನ್ನು ವೀಕ್ಷಿಸಿದರು.

    ಕಂಬಳ ಓಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಜನ ಸಮೀಪದ ಆಹಾರದ ಮಳಿಗೆಗಳಿಗೆ ಲಗ್ಗೆ ಹಾಕಿದರು. ಕರಾವಳಿಯ ಪ್ರಮುಖ ಖಾದ್ಯಗಳಾದ ಗೋಲಿ ಬಜೆ, ಜಿಲೆಬಿ, ಮೀನೂಟ, ಕೋಳಿ ರೊಟ್ಟಿ, ಐಸ್‌ಕ್ರೀಂ ಬಿಸಿ ದೋಸೆಯಂತೆ ಬಿಕರಿಯಾದವು. ಇತರ ಮಳಿಗೆಗಳಲ್ಲಿ ಭರ್ಜರಿ ವಹಿವಾಟು ನಡೆದು ವ್ಯಾಪಾರಸ್ಥರ ಜೇಬು ಭರ್ತಿಯಾಗಲು ಕಂಬಳ ಪರೋಕ್ಷವಾಗಿ ನೆರವಾಯಿತು.

    ಸೆಲಿಬ್ರಿಟಿಗಳ ತಾರಾಲೋಕ:

    ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವು ಸ್ಯಾಂಡಲ್‌ವುಡ್ ತಾರೆಯರನ್ನು ಆಕರ್ಷಿಸಿತು. ಚಿತ್ರನಟ-ನಟಿಯರಾದ ಉಪೇಂದ್ರ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಪೂಜಾ ಹೆಗ್ಡೆ, ಬೃಂದಾ ಆಚಾರ್ಯ ಸಹಿತ ಕಿರುತೆರೆಯ ಹಲವು ಕಲಾವಿದರು ಪಾಲ್ಗೊಂಡಿದ್ದರು. ಇವರ ಜತೆಗೆ ಮುಂಬೈ, ಮಂಗಳೂರು, ಉಡುಪಿ ಭಾಗದ ಉದ್ಯಮಿಗಳು ಆಗಮಿಸಿದ್ದರು. ಶಾಸಕರಾದ ಎನ್.ಹ್ಯಾರೀಶ್, ಗುರುರಾಜ್ ಗಂಟೀಹೊಳೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರರು ಹಾಜರಿದ್ದರು.

    ಟ್ರಾಫಿಕ್ ಜಾಮ್‌ಗೆ ಸವಾರರು ಹೈರಾಣ:

    ಕಂಬಳ ನೋಡಲು ಬಂದವರು ವಾಪಸ್ ಮನೆಗೆ ತೆರಳುವ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು. ಮಧ್ಯಾಹ್ನದ ಬಳಿಕ ಅರಮನೆ ಮೈದಾನದತ್ತ ಜನಸಾಗರವೇ ಹರಿದುಬಂದ ಕಾರಣ ಅಸಂಖ್ಯೆ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಹುಡುಕಲು ಕಷ್ಟವಾಯಿತು. ಪೊಲೀಸರು ಹಾಗೂ ಸ್ವಯಂಸೇವಕರ ಸೂಚನೆ ಹೊರತಾಗಿಯೂ ವಾಹನ ನಿಲುಗಡೆಗೆ ಎದುರಿಸಿರು ಬಿಡುವಂತಾಯಿತು. ಕಂಬಳ ನಡೆದ ಸ್ಥಳದ ಸುತ್ತಲಿನ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತನಗರ, ಅರಮನೆ ರಸ್ತೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿತ್ತು. ರಾತ್ರಿ 10ರ ವೇಳೆಯೂ ಮೇಖ್ರಿ ವೃತ್ತದ ಬಳಿ ಸಂಚಾರ ದಟ್ಟಣೆಯಲ್ಲಿ ಸವಾರರು ಸಿಲುಕಿ ಹೈರಾಣರಾಗಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts