ಮೈಸೂರು: ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಬೆನ್ನಿಗೇ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ನಡೆಯಿತಾ? ಮಹಿಳೆಯೊಬ್ಬಳ ಸಾವಿನ ಹಿಂದೆ ಇಂಥದ್ದೊಂದು ಅನುಮಾನ ಮೂಡಿದ್ದು, ಹೇಗೆ ಸತ್ತಿರಬಹುದು ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ (ತಿ.ನರಸೀಪುರ) ತಾಲೂಕಿನ ಮೂಗೂರಿನಲ್ಲಿ ಈ ಘಟನೆ ನಡೆದಿದೆ. ಭಾಗ್ಯಮ್ಮ ಎಂಬ 36 ವರ್ಷದ ಮಹಿಳೆಯೇ ಸಾವಿಗೀಡಾದವಳು. ಭಾಗ್ಯಮ್ಮ ಬಹಿರ್ದೆಸೆಗೆಂದು ಹೋಗಿದ್ದಾಗ ಈ ಅನಾಹುತ ಸಂಭವಿಸಿದೆ.
ಬಹಿರ್ದೆಸೆಗೆ ಹೋಗಿದ್ದ ಆಕೆ ಮರಳದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಕಾಲುವೆಯೊಂದರಲ್ಲಿ ಚೀಲವೊಂದು ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿ ಕಂಡ ಅದನ್ನು ತೆರೆದು ನೋಡಿದಾಗ ಅದರಲ್ಲಿ ಭಾಗ್ಯಮ್ಮನ ಶವ ಇತ್ತು. ದುಷ್ಕರ್ಮಿಗಳು ಆಕೆಯ ಕತ್ತು ಕೊಯ್ದು ಶವವನ್ನು ಚೀಲಕ್ಕೆ ತುಂಬಿ ಕಾಲುವೆಗೆ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಮಾತ್ರವಲ್ಲ ಆಕೆಯನ್ನು ಯಾರೋ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ತಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.