ಬೆಳಗಾವಿ: ಸಾಲದ ಶೂಲಕ್ಕೆ ಬಲಿಯಾದರು ಎಂಬುದನ್ನು ಕೇಳಿರುತ್ತೇವೆ. ಆದರೆ ಇದು ಸಾಲದ ಶೂಟ್ಗೆ ಬಲಿಯಾದರು ಎಂಬಂಥ ಘಟನೆ. ಏಕೆಂದರೆ ಸಾಲ ಪಡೆದವರೇ ಈ ಮಹಿಳೆಯನ್ನು ಗುಂಡಿಟ್ಟು ಕೊಂದಿದ್ದಾರೆ ಎನ್ನಲಾಗಿದೆ.
ಸಾಲ ನೀಡಿದ್ದ ಮಹಿಳೆಯೊಬ್ಬರು ನಿನ್ನೆಯಷ್ಟೇ ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ಪಡೆದವರು ಹಣ ಮರಳಿಸದ ಜತೆಗೆ ಮಾನಹಾನಿ ಆಗುವಂಥ ಅಪಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಈ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅಂಥದ್ದೇ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾಲ ನೀಡಿ ಪ್ರಾಣ ಕಳೆದುಕೊಂಡಂತಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಇಂದು ಈ ಪ್ರಕರಣ ನಡೆದಿದೆ. ಇಲ್ಲಿನ ಶೈಲಾ ಸುಬೇದಾರ್ ಎಂಬಾಕೆಯನ್ನು ಯಾರೋ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಗಂಡ ಹಾಗೂ ಮಕ್ಕಳಿಲ್ಲದ ಈ ಏಕಾಂಗಿ ಮಹಿಳೆ ಬಡ್ಡಿ ಮೇಲೆ ಸಾಲ ನೀಡುತ್ತಿದ್ದರು.
ದೊಡ್ಡ ಮೊತ್ತವನ್ನೇ ಸಾಲ ನೀಡುತ್ತಿದ್ದ ಈ ಮಹಿಳೆ ಸುಮಾರು 20 ಲಕ್ಷ ರೂಪಾಯಿಯವರೆಗೂ ಸಾಲ ನೀಡಿದ್ದಾರೆ ಎನ್ನಲಾಗಿದೆ. ಸಾಲ ಪಡೆದವರೇ ಈ ಹತ್ಯೆ ಮಾಡಿರಬಹುದು ಎಂದು ಸದ್ಯಕ್ಕೆ ಶಂಕೆ ವ್ಯಕ್ತವಾಗಿದೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.