ಜಿಲ್ಲೆ

ವೈದ್ಯರು ಹೇಳಿದ್ದು 3 ಮಾತ್ರೆ; ರೋಗಿ ನುಂಗಿದ್ದು 3 ಪಟ್ಟು ಹೆಚ್ಚು, ಮುಂದೇನಾಯ್ತು?

ನೆಲಮಂಗಲ: ನಮಗೆ ಸಣ್ಣ ಜ್ವರ ಬಂದಾಗ ವೈದ್ಯರನ್ನು ಸಂಪರ್ಕಿಸದೇ ಮಾತ್ರೆ ನುಂಗುತ್ತೇವೆ. ಇಲ್ಲೊಬ್ಬ ಮಹಿಳೆ ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆ ಹೊಂದಿದ್ದರು. ಇವರು ತಲೆನೋವು ಹೆಚ್ಚಾಯಿತೆಂದು ಹೆಚ್ಚಿನ ಮಾತ್ರೆಗಳನ್ನು ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರಮ್ಮ (28) ಎನ್ನುವ ಮಹಿಳೆ ಕಳೆದ ಎಂಟು ವರ್ಷಗಳಿಂದ ಉಸಿರಾಟದ ತೊಂದರೆ, ತಲೆನೋವಿನಿಂದ ಬಳಲುತ್ತಿದ್ದರು. ದಿನನಿತ್ಯಕ್ಕಿಂತ ಹೆಚ್ಚು ತಲೆನೋವು ಅನುಭವಿಸುತ್ತಿದ್ದರು ಎಂದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ಇವರು ಸೇವಿಸಿದ್ದಾರೆ.

ವೈದ್ಯರ ಸಲಹೆ ಪ್ರಕಾರ ಚಂದ್ರಮ್ಮ ಪ್ರತಿದಿನ 3 ಮಾತ್ರೆ ಸೇವಿಸಬೇಕಿತ್ತು. ಆದರೆ ಇವರು ನಿನ್ನೆ ತಲೆನೋವು ಹೆಚ್ಚಾಯಿತು ಎಂದು ಒಂದೇ ಬಾರಿಗೆ 3 ಪಟ್ಟು ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಇದರಿಂದ ಅಸ್ವಸ್ಥರಾದ ಚಂದ್ರಮ್ಮರನ್ನು ಅವರ ಕುಟುಂಬದವರು ಕೂಡಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದರು.

ಆದರೆ ದುರದೃಷ್ಟವಶಾತ್​, ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಚಂದ್ರಮ್ಮ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.