ಬೆಂಗಳೂರು: ಕೌಟುಂಬಿಕ ಕಲಹ ಪರಿಹರಿಸುತ್ತೇನೆ ಎಂದು ಗೃಹಿಣಿಗೆ ನಂಬಿಸಿದ ಅಪರಿಚಿತ ವ್ಯಕ್ತಿ, ಗುರುನಾನಕ್ ಫೋಟೋ ಕೊಟ್ಟು ಪೂಜೆ ನೆಪದಲ್ಲಿ ಗೋಧಿ ಹಿಟ್ಟಿನಲ್ಲಿ ಚಿನ್ನಾಭರಣ ಬಚ್ಚಿಟ್ಟು 40.8 ಗ್ರಾಂ ಚಿನ್ನದ ಬಳೆ, 30 ಗ್ರಾಂ ಮಾಂಗಲ್ಯ ಸರ ಮತ್ತು 11 ಗ್ರಾಂ ಉಂಗುರ ದೋಚಿದ್ದಾನೆ. ಮಲ್ಲತಹಳ್ಳಿ ಕೆಂಗುಂಟೆಯ 43 ವರ್ಷದ ಗೃಹಿಣಿ ವಂಚನೆಗೆ ಒಳಗಾದವರು. ಈಕೆ ಕೊಟ್ಟ ದೂರಿನ ಮೇರೆಗೆ ಅನ್ನಪೂರ್ಣೆಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಾನುವಾರು ಸಂಖ್ಯೆ ಇಳಿಕೆ, ಹಾಲು ಉತ್ಪಾದನೆ ಏರಿಕೆ!
6ರ ಬೆಳಗ್ಗೆ 11.15ರಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ಗೃಹಿಣಿ, ಪೂಜೆಯಲ್ಲಿ ತೊಡಗಿದ್ದರು. ಅದೇ ವೇಳೆಗೆ 25 ವರ್ಷದ ಅಪರಿಚಿತ ವ್ಯಕ್ತಿ, ಆಕೆಯ ಮನೆ ಬಳಿಗೆ ಹೋಗಿ ಹಿಂದಿಯಲ್ಲಿ ಮಾತನಾಡುತ್ತ ಬಾಗಿಲು ಬಡಿದಿದ್ದ. ಹೊರಗೆ ಬಂದ ಗೃಹಿಣಿ ಕೈಗೆ ಗುರುನಾನಕ್ ಫೋಟೋ ಕೊಟ್ಟು ಆಕೆಯ ಪತಿ ಮತ್ತು ಕುಟುಂಬ ಸದಸ್ಯರ ನಡುವಿನ ಸಮಸ್ಯೆ ಬಗ್ಗೆ ಮಾತನಾಡಿದ್ದ. ಅಶ್ಚರ್ಯಗೊಂಡ ಗೃಹಿಣಿ, ಆತನನ್ನು ಮನೆ ಒಳಗೆ ಕಡೆದು ಕೂರಿಸಿ ಮಾತನಾಡಿಸಿದ್ದಳು. ಅದಕ್ಕೆ ಅಪರಿಚಿತ ವ್ಯಕ್ತಿ, ‘ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಬೇಡಿ. ನನಗೆ ಒಂದು ಪೆನ್ ಮತ್ತು ಪೇಪರ್ ಕೊಡಿ’ ಎಂದು ಕೇಳಿದ್ದ. ಗೃಹಿಣಿ ಪೂಜೆ ಮುಗಿಸಿದ ಬಳಿಕ, ತಾನು ಬರೆದ ಪೇಪರ್ ಕೊಟ್ಟು ನಿಮ್ಮ ಗಂಡ, ಅತ್ತೆ, ಮಾವ, ಮಕ್ಕಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಎಂದಿದ್ದ. ಗೃಹಿಣಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಪೇಪರ್ನಲ್ಲಿ ಈ ಮೊದಲೇ ಬರೆದಿದ್ದ. ಅದನ್ನು ಕಂಡ ಗೃಹಿಣಿ, ಆತನ ಮಾತುಗಳನ್ನು ನಂಬಿದ್ದಳು.
ಆಗ ‘ನಿಮ್ಮ ಕುಟುಂಬದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಹೇಳಿ ಗೋಧಿ ಹಿಟ್ಟನ್ನು ಪಡೆದು ಕಲಸಿ ಎರಡು ಮುದ್ದೆ ಮಾಡಿದ್ದ. ನಿಮ್ಮ ಮದುವೆಯಲ್ಲಿ ಕೊಟ್ಟಿದ್ದ ಎಲ್ಲ ಚಿನ್ನಾಭರಣ ತಂದುಕೊಡುವಂತೆ ಕೇಳಿ ಪಡೆದುಕೊಂಡು ಒಂದು ಮುದ್ದೆಯಲ್ಲಿ ಬಚ್ಚಿಟ್ಟಿದ್ದ. ನಂತರ ಗೃಹಿಣಿ ಕೈಗೆ ಕೊಟ್ಟು, ‘ಇದನ್ನು ದೇವರ ಮನೆಯಲ್ಲಿಟ್ಟು 48 ದಿನ ಪೂಜೆ ಮಾಡಿದರೆ ನಿಮಗೆ ಬಂದಿರುವ ಕಷ್ಟಗಳು ಪರಿಹಾರವಾಗಲಿವೆ. ಆದರೆ, ಇದನ್ನು ಮತ್ತೆ ಮುಟ್ಟಿದರೆ ಅಥವಾ ಯಾರಿಗಾದರೂ ಹೇಳಿದರೆ ಪೂಜೆ ಫಲಿಸುವುದಿಲ್ಲ. ನಿಮಗೆ ಇರುವ ಕಷ್ಟಗಳು ಹೆಚ್ಚಾಗಲಿವೆ’ ಎಂದು ಹೇಳಿ ಹೊರಟು ಹೋಗಿದ್ದ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜಸ್ಪ್ರೀತ್ ಬುಮ್ರಾ! ಮಾಜಿ ಕ್ರಿಕೆಟಿಗ ವಾಸೀಮ್ ಅಕ್ರಂ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್
ಸ್ವಲ್ಪ ಹೊತ್ತು ಆದ ಮೇಲೆ ಆತನ ಮೇಲೆ ಅನುಮಾನಗೊಂಡ ಗೃಹಿಣಿ, ಗೋಧಿ ಹಿಟ್ಟಿನ ಮುದ್ದೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಚಿನ್ನಾಭರಣ ಇರಲಿಲ್ಲ. ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ, ಬೇರೆಯವರಿಗೆ ಹೇಳಲು ಭಯವಾಗಿ ಗೃಹಿಣಿ ಕೊನೆಗೆ ಕುಟುಂಬ ಸದಸ್ಯರ ಸಲಹೆ ಮೇರೆಗೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ತೆ ಫೋಟೋ ಕೇಳಿ ಯಾಮಾರಿಸಿದ: ಗೋಧಿ ಹಿಟ್ಟಿನ ಮುದ್ದೆ ಮಾಡಿದ ಅಪರಿಚಿತ ವ್ಯಕ್ತಿ, ಚಿನ್ನಾಭರಣ ಪಡೆದ ಮೇಲೆ ಗೃಹಿಣಿಗೆ ನಿಮ್ಮ ಅತ್ತೆಯ ಫೋಟೋ ತಂದು ಕೊಡುವಂತೆ ಸೂಚಿಸಿದ್ದ. ಗೃಹಿಣಿ ಅತ್ತೆಯ ಫೋಟೋವನ್ನು ತರಲು ರೂಮ್ ಒಳಗೆ ಹೋದಾಗ ಚಿನ್ನಾಭರಣ ಬಚ್ಚಿಟ್ಟಿದ್ದ ಮುದ್ದೆಯನ್ನು ಬದಲಾಯಿಸಿ ಖಾಲಿ ಮುದ್ದೆಯನ್ನು ಕೈಗೆ ಕೊಟ್ಟು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವಂತೆ ಗೃಹಿಣಿಗೆ ಯಾಮಾರಿಸಿದ್ದ. ಗೃಹಿಣಿ ಮನೆ ಬಳಿಗೆ ಹಲವು ಬಾರಿ ಬಂದು ಅಕ್ಕಪಕ್ಕದಲ್ಲಿ ವಿಚಾರಿಸಿ ಆಕೆಯ ಕುಟುಂಬದ ಬಗ್ಗೆ ಮೊದಲೇ ತಿಳಿದುಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.