ಜಿಲ್ಲೆ

ಕುಂದಾಪುರ ತಾಲೂಕಲ್ಲಿ ಗಾಳಿ ಮಳೆಗೆ ಹಾನಿ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಾಪಕ ಹಾನಿ ಉಂಟಾಗಿದೆ.

ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಚರಂಡಿ, ತೋಡುಗಳು ತುಂಬಿ ಹರಿಯುತ್ತಿವೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲೇ ನೀರು ಹರಿಯುತ್ತಿದೆ.

ಗಾಳಿ-ಮಳೆ ಹೆಚ್ಚಾಗಿರುವುದರಿಂದ ಕಡಲು ಪ್ರಕ್ಷುಬ್ಧಗೊಂಡಿದೆ. ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಹೊಸಾಡು, ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ.

ತ್ರಾಸಿ ಗ್ರಾಮದ ಹೊಸವಕ್ಲು ಮನೆ ಎಂಬಲ್ಲಿನ ಪದ್ದು ಪೂಜಾರಿ ಎಂಬುವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದೆ. ಕೋಟೇಶ್ವರದ ಗೋಪಲಾಡಿ ರಸ್ತೆ ನಿವಾಸಿ ಸುಶೀಲಾ ಎಂಬುವರ ಮನೆ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ.