ಬಂಟ್ವಾಳ: ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಎಳೆಯ ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ಕಲಿಕಾ ಹಬ್ಬ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದು ಸಂಜೀವ ಪೂಜಾರಿ ಹೇಳಿದರು.
ಬಂಟ್ವಾಳ ತಾಲೂಕಿನ ವೀರಕಂಬದ ಮಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಲಡ್ಕ ಕ್ಲಸ್ಟರ್‌ಮಟ್ಟದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬದಲ್ಲಿ ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ ಅಥವಾ ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಸಣ್ಣ ಕಥೆ ಕಟ್ಟುವುದು ಮುಂತಾದ ಚಟುವಟಿಕೆಗಳು ಕ್ಲಸ್ಟರ್ ಹಂತದ ಶಾಲೆಗಳ ನಡುವೆ ನಡೆಯುತ್ತವೆ ಎಂದು ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ವಿವರಿಸಿದರು.
ವೀರಕಂಬ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ವೀರಕಂಬ ಗ್ರಾಪಂ ಸದಸ್ಯೆ ಗೀತಾ ಗಾಂಭೀರ್, ಕಲ್ಲಡ್ಕ ಮಾದರಿ ಶಾಲೆ ಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್, ಬಂಟ್ವಾಳ ತಾಲೂಕು ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕಿ ಪ್ರತಿಮಾ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ರವೀಂದ್ರ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಹಳೇ ವಿದ್ಯಾರ್ಥಿ ಸಂಘ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ, ಕಲ್ಲಡ್ಕ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಾದ ನೆಟ್ಲ, ಕಲ್ಲಡ್ಕ, ಬೋಳಂತೂರು, ಗೋಳ್ತಮಜಲು, ಬಾಯಿಲ, ಹಾಗೂ ಕೆಲಿಂಜ ಶಾಲೆ ಶಿಕ್ಷಕರು ಮತ್ತು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು. ದೈಹಿಕ ಶಿಕ್ಷಕ ಇಂದು ಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.