ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ 412 ಕೋಟಿ ರೂ. ಅನುದಾನ ಲಭ್ಯವಿದೆ. ಇತರ ಜಿಲ್ಲೆಗಳಲ್ಲಿ ಸಾಕಷ್ಟು ಅನುದಾನವಿದ್ದು, ಹೆಚ್ಚಿನ ಅನುದಾನ ಬೇಕಾದರೆ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಮಂಗಳವಾರ ಅತಿವೃಷ್ಟಿಗೆ ಸಂಬಂಧಿಸಿದಂತೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶೀಘ್ರ ಎಲ್ಲ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಸಂಭವಿಸಿರುವ ಹಾನಿಗೆ ಹೆಚ್ಚಿನ ಪರಿಹಾರ ಅವಶ್ಯಕತೆ ಇದ್ದು, ಅದಕ್ಕಾಗಿ ಮುಂದಿನ ವಾರ ದೆಹಲಿಗೆ ಹೋಗಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್-19 ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಶಾಸಕರು ತಂತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ಕಳುಹಿಸಬೇಕು. ಎನ್ಡಿಆರ್ಎಫ್ ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿ ಮಾತ್ರ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡಿರುವ 44,156 ಫಲಾನುಭವಿಗಳಿಗೆ 488 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಕಳೆದ ವರ್ಷ ಆರಂಭಿಸಿದ್ದ ಮನೆ ಪರಿಹಾರ ತಂತ್ರಾಂಶ ಪುನಃ ಆರಂಭಿಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು. ಅಧಿಕಾರಿಗಳು ಖುದ್ದಾಗಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಈ ವರ್ಷದ ಹಾನಿ ವರದಿ ಸಕಾಲದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ ವಹಿಸಲಾಗುವುದು ಎಂದರು.
ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಶಾಸಕರು ಸಭೆಯಲ್ಲಿ ಇದ್ದರು.