ಜಿಲ್ಲೆ

ಅಮ್ಚಿನಡ್ಕ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

Avinash R

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಪೆರ್ನಾಜೆ ಪರಿಸರಕ್ಕೆ ಸೋಮವಾರ ರಾತ್ರಿ ಲಗ್ಗೆಯಿಟ್ಟು ಮೂರು ಮಂದಿ ಕೃಷಿಕರ ತೋಟಗಳಲ್ಲಿ ಅಪಾರ ಪ್ರಮಾಣದ ಕೃಷಿ ನಾಶ ಮಾಡಿದ್ದ ಕಾಡಾನೆ ಮಂಗಳವಾರ ರಾತ್ರಿ ಪೆರ್ನಾಜೆ ಸಮೀಪದ ಅಮ್ಚಿನಡ್ಕ ಪರಿಸರದ ಮುಖಾರಿಮೂಲೆ ವ್ಯಾಪ್ತಿಯ ಕೃಷಿಕರ ತೋಟಗಳಿಗೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದೆ. ಕಾಡಾನೆಯ ನಿರಂತರ ದಾಳಿಯಿಂದಾಗಿ ಈ ಭಾಗದ ಕೃಷಿಕರಲ್ಲಿ ಕೃಷಿ ಹಾನಿ ಆತಂಕದ ಜತೆಗೆ ಭೀತಿ ಉಂಟಾಗಿದೆ.

ಮಂಗಳವಾರ ರಾತ್ರಿ ಮಾಡನ್ನೂರು ಗ್ರಾಮದ ಅಮ್ಚಿನಡ್ಕ ಸಮೀಪದ ಮುರಳಿಸ್ಟೋರ್ ನಿವಾಸಿ ಶರತ್‌ಕುಮಾರ್ ರೈ ಅವರ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ 100ಕ್ಕೂ ಅಧಿಕ ಬಾಳೆಗಿಡಗಳನ್ನು ಹಾಗೂ 2 ಅಡಕೆ ಗಿಡಗಳನ್ನು ನಾಶಮಾಡಿದೆ. ತೋಟದಲ್ಲಿದ್ದ 2 ದೀವಿ ಹಲಸು ಮರಗಳನ್ನು ಹಾನಿಗೊಳಿಸಿದೆ. ಪಕ್ಕದ ಮುಖಾರಿಮೂಲೆ ನಿವಾಸಿ ಅಬ್ದುಲ್ ರಜಾಕ್ ಎಂಬುವರ ತೋಟದಲ್ಲಿ 100ಕ್ಕೂ ಅಧಿಕ ಬಾಳೆಗಿಡಗಳನ್ನು ಮತ್ತು 2 ಅಡಕೆ ಗಿಡಗಳನ್ನು ನಾಶ ಮಾಡಿರುವ ಕಾಡಾನೆ ತೆಂಗಿನಮರವೊಂದನ್ನು ಮುರಿದು ಹಾಕಿದೆ.

ಘಟನೆಯ ಕುರಿತು ಶರತ್‌ಕುಮಾರ್ ರೈ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.