ಪುತ್ತೂರು ಗ್ರಾಮಾಂತರ: ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಅಲ್ಲಿಲ್ಲಿ ನಡೆಯುತ್ತಿರುವ ನಡುವೆಯೇ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕ ಪ್ರದೇಶಕ್ಕೆ ಕಾಡಾನೆ ಲಗ್ಗೆಯಿಟ್ಟು, ಹಲವು ಮಂದಿ ಕೃಷಿಕರ ಕಷಿ ಹಾನಿ ಮಾಡಿದೆ. ಕಳೆದ ಡಿಸೆಂಬರ್ ತಿಂಗಳ ಬಳಿಕ ಕಾಡಾನೆ ಮತ್ತೆ ಕೆಮ್ಮತ್ತಡ್ಕ ಪ್ರದೇಶಕ್ಕೆ ಕಾಲಿಟ್ಟು ಕೃಷಿ ಹಾನಿ ಮುಂದುವರಿಸಿದೆ.
ಕೆಮ್ಮತ್ತಡ್ಕ ಪ್ರದೇಶ ವ್ಯಾಪ್ತಿಗೆ ಶನಿವಾರ ರಾತ್ರಿ ವೇಳೆ ಕಾಡಾನೆ ಬಂದು ಅಲ್ಲಿನ ಕೃಷಿಕರಾದ ಯೋಗೀಶ್ ಕೆಮ್ಮತ್ತಡ್ಕ, ಶಾಂತಪ್ಪ ಕೆಮ್ಮತ್ತಡ್ಕ, ರಿತಿನ್ ಕೆಮ್ಮತ್ತಡ್ಕ, ಶೇಷಪ್ಪ ಪೂಜಾರಿ ಕೆಮ್ಮತ್ತಡ್ಕ, ಆನಂದ ಪೂಜಾರಿ, ಉಮೇಶ್ ಪೂಜಾರಿ, ಈಶ್ವರ ನಾಯ್ಕ ಎಂಬುವರ ಕೃಷಿ ತೋಟಗಳಲ್ಲಿ ಬಾಳೆಗಿಡ, ಅಡಕೆ ಸಸಿ, ಹಲಸಿನ ಮರ ಹಾಗೂ ಇನ್ನಿತರ ಕೃಷಿಗಳನ್ನು ನಾಶಗೊಳಿಸಿದೆ. ಆನೆ ತುಳಿತದಿಂದಾಗಿ ತೋಟಕ್ಕೆ ಅಳವಡಿಸಿದ ನೀರಿನ ಪೈಪ್ ಲೈನ್‌ಗಳು ಕೂಡ ಹಾನಿಗೊಂಡಿವೆ.
ಸೋಲಾರ್ ತಂತಿ ಅಳವಡಿಸದ ಭಾಗದಿಂದ ದಾಳಿ
ಕಾಡಾನೆ ಹಾವಳಿ ತಡೆಗಾಗಿ ಪೆರ್ನಾಜೆ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಬದಿಯಲ್ಲಿ ಸೋಲಾರ್ ತಂತಿ ಅಳವಡಿಸುವ ಕಾರ್ಯ ನಡೆದಿದೆ. ಆದರೆ ಕಾಡಾನೆ ಕೆಮ್ಮತ್ತಡ್ಕ ಭಾಗದ ತೋಡಿನ ಬಳಿ ಸೋಲಾರ್ ತಂತಿ ಅಳವಡಿಸದ ಗ್ಯಾಪ್ ಮೂಲಕ ಕೆಮ್ಮತ್ತಡ್ಕ ವ್ಯಾಪ್ತಿಗೆ ಕಾಲಿಟ್ಟು ಕೃಷಿ ಹಾನಿ ಮಾಡಿದೆ. ಸ್ಥಳಕ್ಕೆ ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಮದನ್, ಅರಣ್ಯ ರಕ್ಷಕ ದೀಕ್ಷಿತ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಮ್ಮತ್ತಡ್ಕ ತೋಡಿನ ಬಳಿ ಸೋಲಾರ್ ತಂತಿ ಜೋಡಣೆ ಕಾರ್ಯ ನಡೆಸಿದ್ದಾರೆ.