ಚೆಂಬು ಗ್ರಾಮದ ಊರುಬೈಲಿನಲ್ಲಿ ಗುರುವಾರ ಮುಂಜಾನೆ ರಬ್ಬರ್ ಟ್ಯಾಪರ್ ರವಿ ಎಂಬುವರ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ ಶೆಡ್ ಹಾನಿಗೊಳಿಸಿದೆ. 
ಜಿಲ್ಲೆ

ಕಾಡಾನೆ ದಾಳಿ, ಟ್ಯಾಪಿಂಗ್ ಕಾರ್ಮಿಕ ಪಾರು : ಚೆಂಬು ಗ್ರಾಮದ ಊರುಬೈಲಿನಲ್ಲಿ ಅಪಾರ ಕೃಷಿ ಹಾನಿ

ಸೌಮ್ಯ ಆರ್

ಸುಳ್ಯ: ಚೆಂಬು ಗ್ರಾಮದ ಊರುಬೈಲಿನಲ್ಲಿ ಗುರುವಾರ ಬೆಳಗ್ಗಿನ ಜಾವ ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ಕಾಡಾನೆ ದಿಢೀರ್ ದಾಳಿಗೆ ಮುಂದಾಗಿದ್ದು, ಕಾರ್ಮಿಕ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚೆಂಬು ಗ್ರಾಮದ ಊರುಬೈಲಿನ ಪಾಲ್ತಾಡು ರವಿ ಎಂಬುವರು ಬೆಳಗ್ಗೆ ಟ್ಯಾಪಿಂಗ್ ಮುಗಿಸಿ ಶೆಡ್‌ಗೆ ಹಿಂತಿರುಗುತ್ತಿದ್ದ ವೇಳೆ ಒಂಟಿಸಲಗ ಹಿಂಬದಿಯಿಂದ ದಾಳಿಗೆ ಯತ್ನಿಸಿದ್ದು, ರವಿ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.

ರಬ್ಬರ್ ಶೆಡ್ ಅನ್ನು ಕಾಡಾನೆ ಸಂಪೂರ್ಣ ಹಾನಿಗೊಳಿಸಿದೆ. ಅದಕ್ಕೂ ಮೊದಲು ಊರುಬೈಲಿನಲ್ಲಿರುವ ಡಾ.ಯು.ಪಿ.ಶಿವಾನಂದ ಅವರ ತೋಟ, ವಾಸುದೇವ ಅರಂಬೂರು, ಗೋಪಾಲಕೃಷ್ಣ ಪೈಲಾಜೆ ಅವರ ತೋಟ ಸೇರಿದಂತೆ ಅಕ್ಕಪಕ್ಕದ ಕೃಷಿಕರ ತೋಟದಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿಗೊಳಿಸಿದೆ.