ಜಿಲ್ಲೆ

ಕೊಳ್ತಿಗೆ ಗ್ರಾಮದಲ್ಲಿ ಮುಂದುವರಿದ ಕಾಡಾನೆ ಉಪಟಳ: ಕೃಷಿ ತೋಟಗಳಿಗೆ ಲಗ್ಗೆಯಿಟ್ಟ ಒಂಟಿ ಸಲಗ

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಕೊಳ್ತಿಗೆ ಗ್ರಾಮದ ಕಂಟ್ರಮಜಲು, ಪುಂದ್ರುಕೋಡಿ ವ್ಯಾಪ್ತಿಗೆ ಶನಿವಾರ ರಾತ್ರಿ ಒಂಟಿ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದ್ದು, ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ.

ಕಳೆದ ವಾರ ಕೊಳ್ತಿಗೆ ಗ್ರಾಮದ ಕೊಂರ್ಬಡ್ಕ ವ್ಯಾಪ್ತಿಯ ಕೃಷಿ ತೋಟಗಳಿಗೆ, ಕೊಂರ್ಬಡ್ಕ ಬೀಡುವಿನ ಬೇಸಾಯದ ಗದ್ದೆಗಳಿಗೆ ಕಾಡಾನೆಗಳೆರಡು ಲಗ್ಗೆಯಿಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದ್ದವು. ಇದೀಗ ಮತ್ತೆ ಒಂಟಿ ಕಾಡಾನೆ ಶನಿವಾರ ರಾತ್ರಿ ಪುಂದ್ರಕೋಡಿಯ ಪುಟ್ಟಣ್ಣ ಗೌಡ ಅವರ ಕೃಷಿ ತೋಟಕ್ಕೆ ಲಗ್ಗೆಯಿಟ್ಟು ತೆಂಗು, ಅಡಕೆ, ಗೇರು ಬೀಜ ಕೃಷಿಗಳನ್ನು ಹಾನಿಗೊಳಿಸಿದೆ. ಅಡಕೆ ಮರದಿಂದ ಫಸಲನ್ನು ಕಿತ್ತು ಹಾಕಿ ನಷ್ಟವುಂಟು ಮಾಡಿದೆ.

ಕಂಟ್ರಮಜಲಿನ ಕೃಷಿಕ ಸೇಸಪ್ಪ ಅವರ ಕೃಷಿತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ತೆಂಗು, ಬಾಳೆ ಕೃಷಿ ಹಾಗೂ ದೀವಿಹಲಸು ಮರಗಳನ್ನು ನಾಶಪಡಿಸಿದೆ. ಕಾಡಾನೆ ಬಂದಿರುವ ಮಾಹಿತಿಯರಿತ ಸ್ಥಳೀಯರು ಪಟಾಕಿ, ಗರ್ನಾಲ್ ಸಿಡಿಸಿ ಕಾಡಾನೆಯನ್ನು ಬೆನ್ನಟ್ಟುವ ಪ್ರಯತ್ನ ನಡೆಸಿದ್ದಾರೆ. ಮಾಹಿತಿಯರಿತ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ರಾತ್ರಿ ನಿದ್ದೆ ಬಿಟ್ಟು ಪಟಾಕಿ-ಗರ್ನಾಲ್ ಸಿಡಿಸಬೇಕಾದ ಪ್ರಮೇಯ ಬಂದೊದಗಿದೆ. ಕಳೆದ ವಾರ ಎರಡು ಕಾಡಾನೆಗಳು ಬಂದು ಕೃಷಿ ಹಾನಿ ಮಾಡಿದ್ದವು. ಆದರೆ ಶನಿವಾರ ಒಂಟಿ ಕಾಡಾನೆ ಬಂದು ಕೃಷಿ ಹಾನಿ ಮಾಡಿದೆ. ಬೆಳಗ್ಗೆ ಎದ್ದು ಕೃಷಿ ತೋಟಕ್ಕೆ ಹೋಗಲು ಕೂಡ ಭಯವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.