‘ಸಿಟಿ ಆಫ್ ವಿಕ್ಟರಿ’ ವಿಜಯಪುರದಲ್ಲಿ ಸತತ ಐದು ಬಾರಿ ವಿಜಯ ಸಾಧಿಸಿರುವ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕುವುದು ಕಾಂಗ್ರೆಸ್ಗೆ ಸವಾಲಾಗಿದೆ. ಈ ಬಾರಿ ರಾಜ್ಯದಲ್ಲಿ ಅಧಿಕಾರ ಜತೆಗೆ ಐದು ಗ್ಯಾರಂಟಿಗಳ ಬಲ ಕಾಂಗ್ರೆಸ್ಗಿದ್ದರೆ, ಬಿಜೆಪಿಗೆ ಮೋದಿ ಗ್ಯಾರಂಟಿ ಆಸರೆಯಾಗಿದೆ.
| ಪರಶುರಾಮ ಭಾಸಗಿ ವಿಜಯಪುರ
ವಿಜಯಪುರ ಕ್ಷೇತ್ರ 17 ಲೋಕಸಭಾ ಸಾರ್ವತ್ರಿಕ ಚುನಾವಣೆ ಎದುರಿಸಿದ್ದು, ಕಾಂಗ್ರೆಸ್- 8, ಬಿಜೆಪಿ- 5 ಬಾರಿ ಗೆದ್ದಿದೆ. ಸ್ವತಂತ್ರ ಪಕ್ಷ, ಜನತಾದಳ, ಜನತಾ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೂ ಒಂದೊಂದು ಬಾರಿ ಅವಕಾಶ ಸಿಕ್ಕಿದೆ. ಕಾಳಿಂಗಪ್ಪ ಚೌದರಿ ಕುಟುಂಬದ ವರ್ಚಸ್ಸಿನಿಂದಾಗಿ ಕಾಂಗ್ರೆಸ್ ಸುದೀರ್ಘ ಅವಧಿ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿತ್ತು. 1999ರಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆಯ್ಕೆಯೊಂದಿಗೆ ಖಾತೆ ತೆರೆದ ಕಮಲ ಮುದುಡಲು ಕ್ಷೇತ್ರದ ಜನ ಬಿಟ್ಟಿಲ್ಲ. 2009ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಹಾಲಿ ಸಂಸದ ರಮೇಶ ಜಿಗಜಿಣಗಿ ಸತತ ಮೂರು ಹ್ಯಾಟ್ರಿಕ್ ಸಾಧನೆ ಮೆರೆದರಲ್ಲದೆ ಮತ್ತೊಂದು ಅವಕಾಶಕ್ಕಾಗಿ ಹಾತೊರೆದು ನಿಂತಿದ್ದಾರೆ.
ಹ್ಯಾಟ್ರಿಕ್ ಹೀರೋಗೆ ಮತ್ತೆ ಮಣೆ!: ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಪಳಗಿದ ದಲಿತ ಎಡಗೈ ಸಮುದಾಯದ ಸಂಸದ ರಮೇಶ ಜಿಗಜಿಣಗಿ ಕಾಕಾ, ಬಾಬಾ, ಮಾಮಾ ಎನ್ನುತ್ತಲೇ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ನಾಯಕ. ಜಮೀನಿನಲ್ಲಿ ಬೆಳೆಗೆ ನೀರುಣಿಸುವ ಸಂದರ್ಭ ವಿದ್ಯುತ್ ಕೈಕೊಟ್ಟರೆ ತಕ್ಷಣಕ್ಕೆ ಫೋನ್ ಮಾಡಿ ಸಮಸ್ಯೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಜನರೊಂದಿಗೆ ಇವರು ಆತ್ಮೀಯತೆ ಇಟ್ಟುಕೊಂಡಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ಇದ್ದರೂ ಕಳೆದ ಬಾರಿ ಬಸವನ ಬಾಗೇವಾಡಿಯ ದೇವಸ್ಥಾನ ಪ್ರವೇಶಿಸದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಪ್ರಶ್ನಿಸಿದ್ದಕ್ಕೆ ದೇವಸ್ಥಾನ ಪ್ರವೇಶವನ್ನು ಯಾರೂ ನಿರ್ಬಂಧಿಸಿಲ್ಲ. ನನ್ನ ತಾಯಿ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ಕಲಿಸಿಕೊಟ್ಟ ಸಂಸ್ಕಾರ ಪಾಲಿಸುತ್ತಿದ್ದೇನೆ ಎಂದಿದ್ದರು. ಈ ಎಲ್ಲ ಅಂಶಗಳು ಅವರ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಿದ್ದು, ಮತ್ತೊಂದು ಅವಧಿಗೆ ಟಿಕೆಟ್ ಸಿಗುವುದರಲ್ಲಿ ಅನುಮಾನವೇ ಇಲ್ಲ. ಡಾ. ಬಾಬು ರಾಜೇಂದ್ರ ನಾಯಕ ಹಾಗೂ ನಿವೃತ್ತ ಸಿಪಿಐ ಮಹೀಂದ್ರಕುಮಾರ ನಾಯಿಕ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಪೈಪೋಟಿ
ಕಳೆದ ಬಾರಿ ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಈ ಬಾರಿ ಅಭ್ಯರ್ಥಿ ಕಣಕ್ಕಿಳಿಸುವುದು ಅನಿವಾರ್ಯ. ಸತತವಾಗಿ ಸೋಲು ಕಂಡಿರುವ ಪ್ರಕಾಶ ರಾಠೋಡ ವಿಧಾನ ಪರಿಷತ್ಗೆ ನಾಮ ನಿರ್ದೇಶನಗೊಂಡಿದ್ದು, ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಕಾಂತಾ ನಾಯಕ ಮತ್ತಿತರರು ಟಿಕೆಟ್ ಬಯಸಿದ್ದಾರೆ. ಮೈತ್ರಿ ಲೆಕ್ಕಾಚಾರದಡಿ ಎನ್ಸಿಪಿ ಕೂಡ ಕ್ಷೇತ್ರ ಬಿಟ್ಟುಕೊಡುವಂತೆ ಕಾಂಗ್ರೆಸ್ಗೆ ದುಂಬಾಲು ಬಿದ್ದಿದೆ.
ಜೆಡಿಎಸ್ ಲೆಕ್ಕಾಚಾರವೇನು?
ಕಳೆದ ಬಾರಿ ಜೆಡಿಎಸ್ನ ನಾಗಠಾಣ ಕ್ಷೇತ್ರದ ಶಾಸಕರಾಗಿದ್ದ ಡಾ. ದೇವಾ ನಂದ ಚವಾಣ್ ಅವರ ಪತ್ನಿ ಡಾ.ಸುನಿತಾ ಚವಾಣ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಕಾರಣ ಬಿಜೆಪಿ ಬದಲು ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ನೇರ ಹಣಾಹಣಿ
ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಮಾಜಿ ಸಚಿವ ಸಿ.ಎಸ್. ನಾಡಗೌಡ, ಹ್ಯಾಟ್ರಿಕ್ ಹೀರೋ ಯಶವಂತರಾಯಗೌಡ ಪಾಟೀಲರಂಥ ಶಾಸಕರಿದ್ದರೂ ಕಾಂಗ್ರೆಸ್ಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಮರೀಚಿಕೆೆ. ಜಿಗಜಿಣಗಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳು ಹಿಂದೇಟು ಹಾಕುವುದೇ ಹೆಚ್ಚು. ಸದ್ಯ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಎಂಬ ವಿಶ್ಲೇಷಣೆಯಿದ್ದರೂ ಬಿಜೆಪಿ ಪಾಲಿಗೆ ಸುಲಿದ ಬಾಳೆ ಹಣ್ಣು ಎನ್ನಲಡ್ಡಿಯಿಲ್ಲ.
ಮತ ಲೆಕ್ಕಾಚಾರ
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 6,35,867 ಮತ ಪಡೆದು ಗೆಲುವು ಸಾಧಿಸಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವಾಣ್ 3,77,829 ಮತ ಪಡೆದಿದ್ದರು. ಪಕ್ಷೇತರ ಅಭ್ಯರ್ಥಿ ಧರೆಪ್ಪ ಮಹಾದೇವ ಅರ್ಧಾವೂರ 23,706 ಮತ ಪಡೆದಿದ್ದರು. ಡಾ.ಸುನೀತಾ ಚವಾಣ್ ನಿರೀಕ್ಷಿತ ಮತಗಳು ಲಭಿಸಿರಲಿಲ್ಲ. ಬಿಜೆಪಿ ಮತ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.
ಪ್ರಭಾವ ಬೀರುವ ಅಂಶಗಳು
ಬಿಜೆಪಿಗೆ ರಾಮಮಂದಿರ, ಪ್ರಧಾನಿ ನರೇಂದ್ರ ಮೋದಿ ಹವಾ ಲಾಭ ತಂದುಕೊಡಲಿವೆ. ಕಾಂಗ್ರೆಸ್ಗೆ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಕೆ, ಬಸವ ಜನ್ಮಭೂಮಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನೆರವಾಗಲಿವೆ. ಗ್ಯಾರಂಟಿಗಳೂ ಸಾಥ್ ನೀಡಲಿವೆ.
ಜಿಗಜಿಣಗಿ ಮೈನಸ್
ಸಂಸತ್ ಅಧಿವೇಶನದಲ್ಲಿ ಶೇ. 74 ಹಾಜರಾತಿ ಹೊಂದಿದ್ದು ಬಿಟ್ಟರೆ, ಪ್ರಶ್ನೆಗಳನ್ನು ಕೇಳಿಲ್ಲ. ಚರ್ಚೆಯಲ್ಲೂ ಭಾಗವಹಿಸಿಲ್ಲ.
ರಮೇಶ್ ಜಿಗಜಿಣಗಿ ವಿಜಯಪುರ ರಿಪೋರ್ಟ್ ಕಾರ್ಡ್
ಕ್ಷೇತ್ರಕ್ಕೆ ಅನುದಾನದ ಹರಿವು
ರಮೇಶ ಜಿಗಜಿಣಗಿ ಕಾರ್ಯಕರ್ತರು ಹಾಗೂ ಜನರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆಗೆ ಸ್ಪಂದಿಸುವ ಜತೆಗೆ ಕೇಂದ್ರದಿಂದ ಅನುದಾನ ತರುವಲ್ಲಿ ಹಿಂದೆ ಬಿದ್ದಿಲ್ಲ. ಗುಮ್ಮಟನಗರಿಗೆ ವಿಮಾನ ನಿಲ್ದಾಣ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಲಜೀವನ ಮಿಷನ್ ಅನುಷ್ಠಾನಕ್ಕೆ ಕೇಂದ್ರದಿಂದ 406.25 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು, ಗೂಡ್ಸ್ಶೆಡ್ ನಿರ್ವಣ, 166 ಕೋಟಿ ರೂ. ವೆಚ್ಚದಲ್ಲಿ 5 ರೈಲ್ವೆ ಮೇಲ್ಸೇತುವೆ ನಿರ್ವಿುಸಿದ್ದು ಸಂಸದರ ಹೆಗ್ಗಳಿಕೆೆ.
* ವಿಜಯಪುರ- ಸೋಲಾಪುರ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯನ್ನು 6 ಪಥವಾಗಿ ಮೇಲ್ದರ್ಜೆಗೇರಿಸಿದ್ದಾರೆ.
* ಮಹಾರಾಷ್ಟ್ರ ಗಡಿಯಿಂದ ವಿಜಯಪುರಕ್ಕೆ 90.31 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
* ಕನಮಡಿ-ತಿಕೋಟಾ ಮಾರ್ಗವಾಗಿ ಮಹಾರಾಷ್ಟ್ರ ಗಡಿಯಿಂದ ವಿಜಯಪುರವರೆಗೆ ರಾಷ್ಟ್ರೀಯ ಹೆದ್ದಾರಿ.
* ಕಲಬುರಗಿ- ಸಂಕೇಶ್ವರ ರಾಷ್ಟ್ರಿಯ ಹೆದ್ದಾರಿಯಲ್ಲಿ ವಿಜಯಪುರ-ತೆಲಸಂಗ ತನಕ 42 ಕಿ.ಮೀ. ರಸ್ತೆ ನಿರ್ಮಾಣ
* ವಿಜಯಪುರ- ಹುಬ್ಬಳ್ಳಿ ದ್ವಿಪಥ ರಸ್ತೆ ಕಾಮಗಾರಿ
* 118 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆ
* ಕೃಷಿ ವಿಜ್ಞಾನ ಕೇಂದ್ರಕ್ಕೆ 1.80 ಕೋಟಿ ರೂ. ಅನುದಾನ
* ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಕೋಲ್ಡ್ ಸ್ಟೋರೇಜ್, ಪ್ಯಾಕ್ಹೌಸ್ಗಳಿಗೆ 3.57 ಕೋಟಿ ರೂ. ಅನುದಾನ ಬಿಡುಗಡೆ