ನೆರೆಯ ನೀರು ತುಂಬಿರುವಾಗ ಬಾವಿ 
ಜಿಲ್ಲೆ

ನೆರೆ ನುಗ್ಗಿದರೂ ಬಾವಿ ಪರಿಶುದ್ಧ : ಪೊಸ್ರಾಲಿನಲ್ಲಿ ಅಪೂರ್ವ ದೃಶ್ಯ ತಪ್ಪು ಮಾಹಿತಿಗೆ ಕೃಷಿಕರ ಆರೋಪ

ಇಂದಿರಾ ಎನ್ ಕೆ

ಕಾರ್ಕಳ: ಜುಲೈ 19ರಂದು ಸುರಿದ ಭಾರಿ ಮಳೆಗೆ ತಾಲೂಕಾದ್ಯಂತ ಬಹುತೇಕ ಕಡೆಗಳಲ್ಲಿ ಮನೆ ತೋಟಗಳು ಜಲಾವೃತಗೊಂಡಿದ್ದು, ಅಡಕೆ ತೋಟದಲ್ಲಿ ಸಂಪೂರ್ಣ ನೆರೆ ನೀರು ನುಗ್ಗಿ ತೋಟದಲ್ಲಿದ್ದ ಬಾವಿ ನೀರು ಮಾತ್ರ ಕಲುಷಿತವಾಗದೆ ವಿಸ್ಮಯ ಸೃಷ್ಟಿಸಿದ್ದು ಈ ಬಗ್ಗೆ ಫೋಟೋವೊಂದು ವೈರಲ್ ಆಗಿತ್ತು. ಇದು ಉಪ್ಪಿನಂಗಡಿಯಲ್ಲಿ ನಡೆದ ಘಟನೆ ಎಂದು ಸುದ್ದಿಯಾಗಿದ್ದು ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಪೊಸ್ರಾಲಿನ ಕೃಷಿಕರೊಬ್ಬರು ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪೊಸ್ರಾಲು ಶೆಟ್ಟಿಬೆಟ್ಟು ಬಂಡಸಾಲೆ ನಿವಾಸಿ ಮಧುಸೂದನ ಪೂಜಾರಿ ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ವರ್ಷಗಳ ಹಿಂದೆ ನಿರ್ಮಿಸಲಾದ ತೆರೆದ ಬಾವಿ ಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತದೆ. ಈ ಬಾರಿಯೂ ತೋಟದ ಸಮೀಪದಲ್ಲಿ ಹರಿಯುವ ಶಾಂಭವಿ ನದಿ ನೀರಿನ ಮಟ್ಟ ಹೆಚ್ಚಾಗಿ ನೆರೆ ನೀರು ತೋಟಕ್ಕೆ ಆವರಿಸಿ ತೋಟ ಸಂಪೂರ್ಣ ನೆರೆ ನೀರಿನಿಂದ ಜಲಾವೃತಗೊಂಡಿತ್ತು. ಆದರೆ ಬಾವಿ ನೀರು ಮಾತ್ರ ಕೆಸರು ನೀರು ಸೇರದೆ, ಶುದ್ಧವಾಗಿರುವ ಬಗ್ಗೆ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ ಎನ್ನುವ ತಪ್ಪು ಮಾಹಿತಿ ಎಲ್ಲೆಡೆ ವೈರಲ್ ಆಗಿದೆ. ಆದರೆ ನಿಜಕ್ಕೂ ಈ ಘಟನೆ ನಡೆದಿರುವುದು ಕಾರ್ಕಳ ತಾಲೂಕಿನ ಪೊಸ್ರಾಲಿನಲ್ಲಿ ಎಂದು ಪೋಟೋ ತೆಗೆದ ಸಂಕೇತ್ ಪೂಜಾರಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದಲೂ ಇದೇ ರೀತಿಯಾದ ವಿಸ್ಮಯ ನಡೆಯುತ್ತದೆ. ಇದು ಮೊದಲ ಬಾರಿಯಲ್ಲ. ನಮ್ಮ ತೋಟದಲ್ಲಿರುವ ಈ ಬಾವಿ ಫೋಟೋವನ್ನು ನಾನು ತೆಗೆದು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಆ ಬಳಿಕ ಎಲ್ಲೆಡೆ ವೈರಲ್ ಆಗಿ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ನಿಜಕ್ಕೂ ಈ ರೀತಿಯ ವಿಸ್ಮಯ ನಡೆದಿರುವುದು ನಮ್ಮ ಮನೆಯ ತೋಟದ ಬಾವಿಯಲ್ಲಿ.-ಸಂಕೇತ್ ಪೂಜಾರಿ, ಪೊಸ್ರಾಲು