ಜಿಲ್ಲೆ

ಉಪ್ಪಿನಂಗಡಿಯಲ್ಲಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಭೂಮಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

ಉಪ್ಪಿನಂಗಡಿ: ಇಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸುಸಜ್ಜಿತ ಬಸ್ ನಿಲ್ದಾಣ ಅಗತ್ಯವಿದೆ. ಈಗ ಇರುವ ನಿಲ್ದಾಣದ ಸಮೀಪದಲ್ಲೇ ಜಾಗ ಗುರುತಿಸಲಾಗಿದ್ದು, ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಸಾರಿಗೆ ಸಚಿವ ರಾಮಲಿಂಗಾರೆಡಿಗೆ ಮನವಿ ಸಲ್ಲಿಸಿದರು.

ಉಪ್ಪಿನಂಗಡಿ ಗ್ರಾಮ ತಾಲೂಕಿನಲ್ಲಿ ಹೋಬಳಿ ಕೇಂದ್ರವಾಗಿದ್ದು ಮಂಗಳೂರು-ಬೆಂಗಳೂರು, ಮತ್ತೂರು-ಧರ್ಮಸ್ಥಳ, ಮಂಗಳೂರು-ಸುಬ್ರಹ್ಮಣ್ಯ ಮಾರ್ಗದಲ್ಲಿರುವ ಅತಿ ದೊಡ್ಡ ಪಂಚಾಯಿತಿ ಆಗಿದೆ. ದಿನವೊಂದಕ್ಕೆ 200 ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ಜಾಗವನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ಮಾಡಲು ಕಾಯ್ದಿರಿಸುವ ಬಗ್ಗೆ ಭೂ ಸ್ವಾಧೀನದ ಮೌಲ್ಯ ನಿಗದಿ ಮಾಡಲಾಗಿತ್ತು. ಬಳಿಕ 2014ರ ಹೊಸ ಭೂ ಸ್ವಾಧೀನ ಕಾಯ್ದೆಯ ನಿಯಮದಂತೆ 13.26 ಕೋಟಿ ರೂ. ಮೊತ್ತ ನಿಗದಿಪಡಿಸಿ 9 ಕೋಟಿ ರೂ. ಠೇವಣಿಯಾಗಿಡುವ ಬಗ್ಗೆ ಸಹಾಯಕ ಆಯುಕ್ತರು ಸೂಚಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಜಾಗ ಬಸ್ ನಿಲ್ದಾಣಕ್ಕೆ ಸೂಕ್ತವಾಗಿರುವುದರಿಂದ ಹಾಗೂ ಭೂ ಮಾಲೀಕರು ಪ್ರಸ್ತುತ ದರ ಸಿಕ್ಕಿದರೆ ಬಸ್ ನಿಲ್ದಾಣಕ್ಕೆ ನೀಡಲು ಒಪ್ಪಿದ್ದಾರೆ. ಉಪ್ಪಿನಂಗಡಿಯಲ್ಲಿರುವ ಮಾರುಕಟ್ಟೆಯ ದರ ನಿಗದಿಪಡಿಸಿ ಜಮೀನಿನ ಮಾಲೀಕರಿಗೆ ಮೊತ್ತ ಪಾವತಿಸಿ ಬಸ್ ನಿರ್ಮಾಣ ಮಾಡಲು ಮಂಜೂರಾತಿ ನೀಡಿ, ಅನುದಾನ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.

ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಮೆಸ್ಕಾಂ ಸಮಿತಿ ಸದಸ್ಯರಾದ ಚಂದ್ರ ಕಲ್ಲಗುಡ್ಡೆ, ರಾಕೇಶ್ ರೈ ಕುದ್ಕಾಡಿ ಹಾಗೂ ಸತೀಶ್ ನಿಡ್ಪಳ್ಳಿ ಉಪಸ್ಥಿತರಿದ್ದರು.