ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ರಾಜ್ಯ ಸರ್ಕಾರದ ಕಾರಾಗೃಹಗಳು ಮತ್ತು ಸುಧಾರಣಾ ಸೇವಗಳ ಇಲಾಖೆ ಸಹಭಾಗಿತ್ವದಲ್ಲಿ ಇಶಾ ಫೌಂಡೇಷನ್, ಶುಕ್ರವಾರ "ಯೋಗಕ್ಷೇಮ' ಕಾರ್ಯಕ್ರಮ ಪ್ರಾರಂಭಿಸಿದೆ.
ಉಪಕ್ರಮದಡಿ ಜೈಲು ಪರಿಸರ ವ್ಯವಸ್ಥೆಯಲ್ಲಿ ಕೈದಿಗಳಿಗೆ ಯೋಗಾಭ್ಯಾಸ ಮೂಲಕ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯ ಹೆಚ್ಚಿಸುವುದು ಉದ್ದೇಶವಾಗಿದೆ. ಯೋಗಕ್ಷೇಮ ಮೂಲಕ ನೀಡಲಾಗುವ ಎಲ್ಲ ಯೋಗಾಭ್ಯಾಸಗಳನ್ನು ಇಶಾ ಫೌಂಡೇಷನ್ ವಿನ್ಯಾಸಗೊಳಿಸಿದೆ. ಆರಂಭದಲ್ಲಿ 16 ಜೈಲುಗಳಲ್ಲಿನ ಕೈದಿಗಳನ್ನು ಸೇರಿಸಲಾಗಿದೆ. ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಇದಕ್ಕೆ ಸಹಕಾರ ನೀಡಿದ್ದಾರೆ.ಕಾರಾಗೃಹ ಇಲಾಖೆಯ ಉಪಕ್ರಮದ ಭಾಗವಾಗಿ ರಾಜ್ಯಾದ್ಯಂತ 54 ಜೈಲುಗಳಲ್ಲಿ ದೈಹಿಕ, ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಯೋಗ, ಧ್ಯಾನ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಮೊದಲ ಹಂತದಲ್ಲಿ ಫೌಂಡೇಷನ್, 10 ಸ್ಥಳಗಳಲ್ಲಿ 1,100 ಕೈದಿಗಳನ್ನು ಒಳಗೊಂಡಿದೆ. ಕೈದಿಗಳಿಗೆ ಮತ್ತು ಸಿಬ್ಬಂದಿಗೆ ಒಂದು ಗಂಟೆ ಕಾಲ ಯೋಗವನ್ನು ಹೇಳಿಕೊಡಲಾಗುತ್ತದೆ. ಯೋಗದಿಂದ ದೇಹ ಮತ್ತು ಮನಸ್ಸಿಗೆ ಸಮತೋಲನ, ಸ್ಥಿರತೆ ತರಲಿದೆ. ಬೆನ್ನುಮೂಳೆ ಬಲಪಡಿಸುವ ಜತೆಗೆ ಶ್ವಾಸಕೋಶದ ಸಾಮಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗದಲ್ಲಿ ಒಬ್ಬರ ಸೂಕ್ಷ್ಮ ಕ್ಷಮತೆ, ಗ್ರಹಿಕೆ ಮತ್ತು ಜೀವನದ ಅನುಭವ ಹೆಚ್ಚಿಸುವ ಸಾಮರ್ಥ್ಯಕ್ಕಾಗಿ ಮಾನವ ಅಂಗರಚನಾಶಾಸ್ತ್ರದ ಮಹತ್ವ ಭಾಗವೆಂದು ಪರಿಗಣಿಸಲಾಗಿದೆ.