ಶಿಥಿಲಗೊಂಡು ಅಪಾಯದಲ್ಲಿರುವ ಕೋಟ ಮೆಸ್ಕಾಂ ಕಚೇರಿ.  
ಜಿಲ್ಲೆ

ಮೆಸ್ಕಾಂ ಕಚೇರಿಗೆ ಅಪಾಯದ ತೂಗುಗತ್ತಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ
ಇಲ್ಲಿನ ಕೋಟ ವ್ಯಾಪ್ತಿಯ ಮೆಸ್ಕಾಂ ಕಚೇರಿ ಶಿಥಿಲಾವಸ್ಥೆಗೆ ತಲುಪಿದ್ದು, ಮೆಸ್ಕಾಂ ಸಿಬ್ಬಂದಿ ಜತೆಗೆ ಗ್ರಾಹಕರ ಜೀವಗಳ ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಮೆಸ್ಕಾಂ ಶಾಖಾ ಕಚೇರಿ ಕಟ್ಟಡಕ್ಕೆ 40 ವರ್ಷಗಳು ಸಂದಿವೆ. ಜೆಇ ಸಹಿತ ಮೆಸ್ಕಾಂ ಲೈನ್‌ಮನ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜೀವದ ಹಂಗು ತೊರೆದು ವಿದ್ಯುತ್ ಸಮಸ್ಯೆಗಳ ವಿರುದ್ಧ ಕಾದಾಡುವ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಸುರಕ್ಷತೆ ಇಲ್ಲದಿರುವುದು ವಿಪರ್ಯಾಸ.

ಸ್ಲ್ಯಾಬ್ ಕುಸಿತ ಆರಂಭ: ಮೆಸ್ಕಾಂ ಕಟ್ಟಡದ ಸ್ಲ್ಯಾಬ್ ನ ಗಾರೆ ತುಂಡುಗಳು ಗ್ರಾಹಕರ ಹಾಗೂ ಸಿಬ್ಬಂದಿ ಜೀವಕ್ಕೆ ಅಪಾಯ ತಂದೊಡ್ಡಿದೆ. ದಿನವೂ ಕಟ್ಟಡದ ಒಂದೊಂದು ಭಾಗಗಳಲ್ಲಿ ಸ್ಲ್ಯಾಬ್ ತುಂಡುಗಳು ಬೀಳುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಗ್ರಾಹಕರ ತಲೆಯ ಮೇಲೆ ಸ್ಲ್ಯಾಬ್ ತುಂಡು ಬಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಮೀನಮೇಷ: ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸಮಾಜಸೇವಕ ಕೋ.ಗಿ.ನಾ ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ನಾಲ್ಕು ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಾಣಕ್ಕಾಗಿ 1.30 ಕೋಟಿ ರೂ. ಮಂಜೂರಾಗಿದೆ ಎಂಬ ಮಾಹಿತಿಯನ್ನು ಸ್ವತಃ ಕೋ.ಗಿ.ನಾ ನೀಡಿದ್ದರು. ಎರಡು ವರ್ಷಗಳ ಹಿಂದೆಯೇ ಟೆಂಡರ್ ಪೂರ್ಣಗೊಂಡಿದ್ದರೂ ಕಟ್ಟಡ ನಿರ್ಮಾಣಕ್ಕೆ ವಿಳಂಬವಾಗುತ್ತಿರುವ ಕುರಿತು ಮೆಸ್ಕಾಂ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದು ಗಮನಕ್ಕೆ ಬಂದಿದೆ. ಕೋಟದಲ್ಲಿ ಮೆಸ್ಕಾಂ ಶಾಖಾ ಮತ್ತು ಉಪವಿಭಾಗ ಕಚೇರಿ ಹೊಸ ಕಟ್ಟಡಕ್ಕೆ ನೀಲಿನಕ್ಷೆ ಸಹಿತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. -ದಿನೇಶ್ ಉಪಾಧ್ಯ, ಅಧೀಕ್ಷಕ ಇಂಜಿನಿಯರ್ ಮೆಸ್ಕಾಂ ಉಡುಪಿ ವೃತ್ತ
-ದಿನೇಶ್ ಉಪಾಧ್ಯ, ಅಧೀಕ್ಷಕ ಇಂಜಿನಿಯರ್ ಮೆಸ್ಕಾಂ ಉಡುಪಿ ವೃತ್ತ
ಕೋಟ ಮೆಸ್ಕಾಂ ಕಟ್ಟಡದ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದೆ. ತುಂಬಾ ವರ್ಷದಿಂದ ಈ ಕಾಂಕ್ರೀಟ್ ಕಟ್ಟಡದ ತುಂಡುಗಳು ಗ್ರಾಹಕರ ಮೇಲೆ ಬೀಳುತ್ತಲೇ ಇವೆ. ಈ ದಿಸೆಯಲ್ಲಿ ಹಳೇ ಕಟ್ಟಡ ಧ್ವಂಸಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಇಲ್ಲವಾದಲ್ಲಿ ಮುಂದಿನ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಧರಣಿ ಕೂರುವುದಾಗಿ ಎಚ್ಚರಿಸುತ್ತೇನೆ. -ನಾಗರಾಜ್ ಪುತ್ರನ್, ಜೀವನ್ ಮಿತ್ರ ಸಮಾಜಸೇವಕ ಕೋಟ
-ನಾಗರಾಜ್ ಪುತ್ರನ್, ಜೀವನ್ ಮಿತ್ರ ಸಮಾಜಸೇವಕ ಕೋಟ