ಚಾಮರಾಜನಗರದ ಬಿಆರ್​ಟಿ ಅರಣ್ಯ ಪ್ರದೇಶದ ಗುಂಡಾಲ್ ಜಲಾಶಯ ಸಮೀಪದ ಅರಣ್ಯದಲ್ಲಿ ಏ. 15 ರಂದು ಮೊದಲ ಬಾರಿಗೆ ಅರಣ್ಯಾಧಿಕಾರಿಗಳ ಕ್ಯಾಮರಾ ಕಣ್ಣಿಗೆ ಕೆಂಪು ತಲೆಯ ರಣಹದ್ದು ಕಾಣಿಸಿಕೊಂಡಿದೆ. 
ಜಿಲ್ಲೆ

Web Exclusive | ಕೆಂಪು ತಲೆ ರಣಹದ್ದು ಪತ್ತೆ; ಅಳಿವಿನಂಚಿನ ಅಪರೂಪದ ಪಕ್ಷಿ ಅರಣ್ಯಾಧಿಕಾರಿಗಳ ಕ್ಯಾಮರಾ ಕಣ್ಣಲ್ಲಿ ಸೆರೆ

Webdesk - Ravikanth

| ರವಿತೇಜ್ ವಿ. ಛತ್ರ ಚಾಮರಾಜನಗರ

ಅಳಿವಿನಂಚಿನಲ್ಲಿರುವ ಅಪರೂಪದ ಪಕ್ಷಿಯೊಂದು ರಾಜ್ಯದ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಬಿಆರ್​ಟಿ (ಬಿಳಿಗಿರಿ ರಂಗನಾಥಸ್ವಾಮಿ ಟೆಂಪಲ್) ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗುಂಡಾಲ್ ಜಲಾಶಯ ಸಮೀಪದ ಅರಣ್ಯದಲ್ಲಿ ಕೆಂಪು ತಲೆಯ ರಣಹದ್ದು ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ಕೆಂಪು ಬಣ್ಣದ ರಣಹದ್ದಿನ ಇರುವಿಕೆ ತಿಳಿದಿತ್ತು. ಆದರೆ ಏ. 15ರಂದು ಮೊದಲ ಬಾರಿಗೆ ಈ ಪಕ್ಷಿ ಅರಣ್ಯಾಧಿಕಾರಿಗಳ ಕ್ಯಾಮರಾ ಕಣ್ಣಿಗೆ ಬೀಳುವ ಮೂಲಕ ಬಿಆರ್​ಟಿ, ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮಾತ್ರವಲ್ಲದೆ, ಪಕ್ಷಿಸಂಕುಲದ ಆವಾಸ ಸ್ಥಳವಾಗಿರುವುದನ್ನೂ ಖಚಿತಪಡಿಸಿದೆ.

ಬಿಆರ್​ಟಿಯಲ್ಲಿ ಈವರೆಗೆ ನಾಲ್ಕು ಜಾತಿಯ ರಣಹದ್ದುಗಳು ಕಾಣಿಸಿಕೊಂಡಿವೆ. ಅದರಲ್ಲಿ ರಣಹದ್ದು, ಬಿಳಿ ರಣಹದ್ದು, ಬಿಳಿ ರಂಪ್ಡ್ ರಣಹದ್ದು ಹಾಗೂ ಕೆಂಪು ತಲೆಯ ರಣಹದ್ದು ಸೇರಿವೆ. ಈ ರಣಹದ್ದುಗಳು ಬಿಆರ್​ಟಿ ಅಲ್ಲದೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ, ನಾಗರಹೊಳೆ ಅರಣ್ಯ ಪ್ರದೇಶದಲ್ಲೂ ಕಾಣಸಿಗುತ್ತವೆ. ಈ ಪಕ್ಷಿಗಳು ತೀರಾ ವಿರಳವಾಗಿದ್ದು, ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹೊತ್ತಿಕೊಂಡಿದೆ.

ಹದ್ದುಗಳ ರಾಜ: ಕೆಂಪುತಲೆ ರಣಹದ್ದನ್ನು ‘ಹದ್ದುಗಳ ರಾಜ’ ಎಂದೇ ಕರೆಯಲಾಗುತ್ತದೆ. ಸತ್ತ ಪ್ರಾಣಿಗಳ ಮಾಂಸವನ್ನು ಬೇರೆ ಪ್ರಾಣಿಗಳು ಒಯ್ಯುವುದು ಈ ಹದ್ದಿಗೆ ಕಾಣಿಸುತ್ತದೆ. ಆಗ ಮೊದಲು ಕೆಂಪುತಲೆ ರಣಹದ್ದು ಬರುತ್ತದೆ. ಹೀಗೆ ಬಂದ ‘ನಾಯಕ’ ಮೊದಲ ಮಾಂಸದ ಭೋಜನ ಸವಿಯುತ್ತದೆ. ನಂತರ ಉಳಿದ ಹದ್ದುಗಳು ತಿನ್ನುತ್ತವೆ. ಕೆಂಪುತಲೆ ರಣಹದ್ದು ಗಾತ್ರದಲ್ಲಿ ಟರ್ಕಿ ಕೋಳಿಯಷ್ಟು ದೊಡ್ಡದಾಗಿದೆ. ಇದರ ಕುತ್ತಿಗೆ ಉದ್ದವಾಗಿದೆ. ಇದು ಎಸಿಪಿಟ್ರಿಡಿಯಾ ಕುಟುಂಬಕ್ಕೆ ಸೇರಿದ ಪಕ್ಷಿ. ಸುಮಾರು 2000 ಕಿ.ಮೀ. ಎತ್ತರದ ಪರ್ವತ ಪ್ರದೇಶ ಮತ್ತು ಮರಗಳಿರುವ ಕಾಡುಗಳೇ ಇದರ ನೆಲೆ.

ಗುಲಾಬಿ ಬಣ್ಣದ ಕುತ್ತಿಗೆ, ತಲೆ ಮತ್ತು ಕಾಲನ್ನು ಹೊಂದಿದ್ದು, ಬಲವಾದ ಚುಂಚು ಇದೆ. ಅದರ ಬುಡದಲ್ಲಿ ಗುಲಾಬಿ -ಕೆಂಪು ಬಣ್ಣವಿದ್ದರೂ ತುದಿಯಲ್ಲಿ ಬೂದು ಬಣ್ಣದ ಅರ್ಧ ಕೊಕ್ಕು ಸೇರಿಸಿದಂತೆ ಭಾಸವಾಗುತ್ತದೆ. ಇದರ ಕುತ್ತಿಗೆ ಉದ್ದವಾಗಿದ್ದು, ಎರಡೂ ಪಾರ್ಶ್ವದಲ್ಲಿ ಗುಲಾಬಿ-ಕೆಂಪು ಬಣ್ಣದ ಚರ್ಮವಿದೆ. ನೋಡಲು ಗಂಡು, ಹೆಣ್ಣು ಎರಡೂ ಒಂದೇ ರೀತಿ ಇರುತ್ತವೆ. ಆದರೆ ಹೆಣ್ಣು ಹಕ್ಕಿಯ ಕಣ್ಣು ಅಚ್ಚಕಪ್ಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ರೆಕ್ಕೆಯೂ ಇದೇ ಬಣ್ಣ ಹೊಂದಿರುತ್ತದೆ. ಅದರ ತುದಿಯಲ್ಲಿ ತಿಳಿ ಬೂದುಮಿಶ್ರಿತ ಕಂದು ಬಣ್ಣದ ಗರಿ ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ರೆಕ್ಕೆಯ ಬುಡದಲ್ಲಿರುವ ಚಿಕ್ಕ ಗರಿ ಕಪ್ಪಾಗಿರುತ್ತದೆ. ಇದರ ಸ್ಥೂಲ ಆಕಾರ ಮತ್ತು ಬಣ್ಣ ನೋಡಿ ಇದನ್ನು ಇತರ ರಣಹದ್ದಿಗಿಂತ ಭಿನ್ನ ಎಂದು ಗುರುತಿಸಬಹುದು. ಸತ್ತ ಪ್ರಾಣಿಗಳನ್ನು ಅದರಲ್ಲೂ ಸತ್ತ ಹಸುಗಳ ಮತ್ತು ರಾಸುಗಳ ಮಾಂಸವನ್ನು ತಿನ್ನುವುದೆಂದರೆ ಈ ರಣಹದ್ದಿಗೆ ಎಲ್ಲಿಲ್ಲದ ಖುಷಿ. ಇದು ಸಾಮಾನ್ಯವಾಗಿ ಬೇಟೆಯಾಡುವುದು ಕಡಿಮೆ. ಹತ್ತು ವರ್ಷದ ಅವಧಿಯಲ್ಲಿ ಇದರ ಸಂತತಿ ಮತ್ತು ಇರುನೆಲೆ ಗಣನೀಯವಾಗಿ ಇಳಿಕೆಯಾಗಿದೆ.

ಆಹಾರ ಸರಪಳಿಯ ಕೊಂಡಿ: ಸತ್ತ ಪ್ರಾಣಿಗಳ ಮಾಂಸ ತಿನ್ನುವ ರಣಹದ್ದು, ಆಹಾರ ಸರಪಳಿ ಏರ್ಪಡಲು ನೆರವಾಗುತ್ತದೆ. ಇದನ್ನು ‘ಅರಣ್ಯ ಪ್ರದೇಶದ ಪೌರಕಾರ್ವಿುಕ’ ಎಂದೂ ಬಣ್ಣಿಸುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ಸಿಂಪಡಿಸಿದ ವಿಷ ರಾಸಾಯನಿಕ ದ್ರಾವಣ ಸೇವಿಸಿ ಸಾವಿಗೀಡಾದ ಜಾನುವಾರುಗಳ ಮಾಂಸವನ್ನು ತಿಂದು ರಣಹದ್ದುಗಳ ಜೀವಕ್ಕೂ ಅಪಾಯ ಬಂದೊದಗಿದೆ. ಈಗೀಗ ಕೆಂಪು ತಲೆಯ ರಣಹದ್ದುಗಳ ಸಂತತಿಯೇ ಕಡಿಮೆಯಾಗುತ್ತಿದೆ.

ಪಕ್ಷಿಗಳ ತಾಣ ಬಿಆರ್​ಟಿ: ಬಿಆರ್​ಟಿ ಅರಣ್ಯ ಪ್ರದೇಶ ವಿಶೇಷ ಪ್ರಭೇದದ ಅನೇಕ ಪಕ್ಷಿ ಮತ್ತು ಪ್ರಾಣಿ ಸಂಕುಲಗಳ ಆವಾಸ ಸ್ಥಾನಕ್ಕೆ ಹೆಸರುವಾಸಿಯಾಗಿದೆ. ಬಿಆರ್​ಟಿ ಅರಣ್ಯ ಪ್ರದೇಶ ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಕಳೆದ ಜನವರಿ 4ರಂದು ಇಲ್ಲಿ ಮೂರು ದಿನಗಳ ಕಾಲ ಪಕ್ಷಿ ಹಬ್ಬವೂ ನಡೆದಿತ್ತು. 2011ರಲ್ಲೂ ಪಕ್ಷಿ ಹಬ್ಬ ಆಚರಿಸಿದ ಸಂದರ್ಭ 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಪತ್ತೆಯಾಗಿದ್ದವು. ದಿನದಿಂದ ದಿನಕ್ಕೆ ಬೇರೆ ಕಡೆಯಿಂದ ಅನೇಕ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದು, ಅಚ್ಚರಿ ಮೂಡಿಸುವಂತಹ ಪಕ್ಷಿಗಳು ಕಾಣಸಿಗುತ್ತವೆ. ಅದರಲ್ಲಿ ಕೆಂಪು ತಲೆಯ ರಣಹದ್ದು ಸಹ ಬಹಳ ವಿಶೇಷ ಮತ್ತು ಅಚ್ಚರಿಗೆ ಸಾಕ್ಷಿಯಾಗಿದೆ.

ಅರಣ್ಯದಲ್ಲಿರುವ ಬಹಳಷ್ಟು ವಿಶೇಷ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿದ್ದು, ಅವುಗಳ ರಕ್ಷಣೆ ಮತ್ತು ಪೋಷಣೆ ಅರಣ್ಯ ಇಲಾಖೆಯದ್ದಾಗಿದೆ. ಸತ್ತ ಪ್ರಾಣಿಗಳನ್ನು ಮೊದಲು ಹೂಳಲಾಗುತ್ತಿತ್ತು ಅಥವಾ ಸುಡಲಾಗುತ್ತಿತ್ತು. ಆದರೆ ಈಗ ಪ್ರಾಣಿ ಸತ್ತರೆ ಮರಣೋತ್ತರ ಪರೀಕ್ಷೆ ನಂತರ, ಸಹಜ ಸಾವಾಗಿದ್ದರೆ ಆಹಾರ ಸರಪಳಿಗಾಗಿ ಹಾಗೆಯೇ ಬಿಡಲಾಗುತ್ತದೆ. ಇದರಿಂದ ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಸಹಕಾರಿಯಾಗಲಿದೆ. ಅನಾರೋಗ್ಯದಿಂದ ಸತ್ತ ಪ್ರಾಣಿಗಳನ್ನು ಮಾತ್ರ ಸುಡಲಾಗುತ್ತದೆ.

| ಮನೋಜ್​ಕುಮಾರ್ ಸಿಸಿಎಫ್, ಚಾಮರಾಜನಗರ